Yash; ‘ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ …’

ದೊಡ್ಡ ಸ್ಟಾರ್‌ ನಟರು ತಮ್ಮ ಚಿತ್ರಗಳ ಪ್ರಚಾರ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಹಾಗಾಗಿ, ಬಹಳಷ್ಟು ಜನ ತಮ್ಮ ಚಿತ್ರಗಳ ಪೋಸ್ಟರ್, ಟೀಸರ್, ಟ್ರೇಲರ್‌ಗಳನ್ನು ದೊಡ್ಡ ನಟರಿಂದ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ, ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ ಎಂದು ಯಶ್‍ (Yash) ಹೇಳಿದ್ದಾರೆ.

ಯೋಗರಾಜ್‍ ಭಟ್‍ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್ 28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಲುಲು ಮಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಯಶ್‍ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಯಶ್‍, ‘ಬಹಳಷ್ಟು ಜನ ಬಂದು ಹೊಸಬರ ಚಿತ್ರವನ್ನು ಲಾಂಚ್ ಮಾಡಿ, ಇವೆಂಟ್‍ಗೆ ಬನ್ನಿ ಎಂದು ಕರೆಯುತ್ತಿರುತ್ತಾರೆ. ಇವೆಂಟ್‍ಗಳಿಂದ ಗಮನ ಸೆಳೆಯಬಹುದು. ನಿಜವಾದ ಗೆಲುವು ಸಿಗೋದು ನಾವು ಬರುವುದರಿಂದಲ್ಲ, ನೀವು ಮಾಡುವ ಕೆಲಸಗಳಿಂದ. ಮೊದಲು ನಾವು ಅಪ್‍ಗ್ರೇಡ್‍ ಆಗಬೇಕು. ಕೆಲಸ ಕಲಿಯಬೇಕು. ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಯಾರ ಮುಂದೆಯೇ ನಾವು ಕಡಿಮೆ ಎಂಬ ಯೋಚನೆ ಇರಬಾರದು. ಕಷ್ಟಪಟ್ಟು ಕೆಲಸ ಮಾಡಬೇಕು. ಬೇರೆಯವರೆಲ್ಲರೂ ನಮಗೆ ಗೌರವ ಕೊಡುವಂತೆ ದುಡಿಯಬೇಕು’ ಎಂದರು.

ಒಳ್ಳೆಯ ಸಿನಿಮಾ ಕೊಟ್ಟರೆ ಜನ ಕೈಬಿಡುವುದಿಲ್ಲ ಎಂದ ಯಶ್‍, ‘ಹಿಂದೆ ನಾನು ಸಹ ಜನ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ, ನಮ್ಮ ಜನ ಬೇರೆ ಭಾಷೆ ಸಿನಿಮಾಗಳನ್ನೇ ನೋಡುತ್ತಾರೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದೆ. ನಮ್ಮ ಕೆಲಸವನ್ನು ನಾವು ಸರಿ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ನಮ್ಮ ಕೈ ಬಿಟ್ಟಿಲ್ಲ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ’ ಎಂದರು.

ಹೊಸದಾಗಿ ಚಿತ್ರರಂಗಕ್ಕೆ ಬರುವವರಿಗೆ ಕಿವಿಮಾತು ಹೇಳಿದ ಯಶ್‍, ‘ಬರೀ ನಟನೆಯಷ್ಟೇ ಸಿನಿಮಾ ಅಲ್ಲ, ನೀವು ಹೇಗೆ ನಿಮ್ಮ ಕೆರಿಯರ್‍ನ ರೂಪಿಸಿಕೊಳ್ಳಬೇಕು, ಟ್ರೆಂಡ್‍ ಏನಾಗುತ್ತಿದೆ, ನಿಮ್ಮ ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಬರಬೇಕು. ನಿರ್ದೇಶಕರೂ ಅಷ್ಟೇ. ತಯಾರಾಗಿ ಬರಬೇಕು’ ಎಂದರು.

‘ಮನದ ಕಡಲು’ ಚಿತ್ರವನ್ನು ಇ.ಕೆ. ಎಂಟರ್‍ಟೈನರ್ಸ್ ಲಾಂಛನದಡಿ ಇ. ಕೃಷ್ಣಪ್ಪ ನಿರ್ಮಿಸಿದ್ದು, ಸುಮುಖ, ಅಂಜಲಿ ಅನೀಶ್‍, ರಾಶಿಕಾ ಶೆಟ್ಟಿ, ದತ್ತಣ್ಣ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.

One thought on “Yash; ‘ನಾವು ಬರುವುದರಿಂದ ಚಿತ್ರ ಗೆಲ್ಲುವುದಿಲ್ಲ, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ …’

Leave a Reply

Your email address will not be published. Required fields are marked *