Vanya; ಅಶ್ವಿನಿ ಪುನೀತ್ ರಾಜ್ಕುಮಾರ್ರಿಂದ ‘ವನ್ಯ’ದ ಶೀರ್ಷಿಕೆ ಅನಾವರಣ

ಬಡಿಗೇರ್ ದೇವೇಂದ್ರ ನಿರ್ದೇಶನದ ಹೊಸ ಸಿನಿಮಾ ‘ವನ್ಯ’ದ ಶೀರ್ಷಿಕೆಯನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅನಾವರಣಗೊಳಿಸಿದರು. ‘ರುದ್ರಿ’ ಮತ್ತು ‘ಇನ್’ ಚಿತ್ರಗಳನ್ನು ಬಡಿಗೇರ್ ದೇವೇಂದ್ರ ಈ ಹಿಂದೆ ನಿರ್ದೇಶಿಸಿದ್ದರು. ‘ವನ್ಯ’ ಸಿನಿಮಾಕ್ಕೆ ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಐಡಿಯಾ ವರ್ಕ್ಸ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಲ್ಲವಿ ಅನಂತ್ ಹಾಗೂ ಪೂಮಗಾಮೆ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
‘ವನ್ಯ’ ಎಂದರೆ ಹೆಣ್ಣಿನ ಹೆಸರು, ಕಾಡು ಎಂಬ ಅರ್ಥದಲ್ಲೂ ಹೇಳಬಹುದು. ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯ, ಅರಣ್ಯವನ್ನು ಉಳಿಸಲು ಮಾಡುವ ಹೋರಾಟದ ಕಥೆಯಿದೆ ಎನ್ನುತ್ತಾರೆ ಬಡಿಗೇರ್ ದೇವೇಂದ್ರ.
2010ರಲ್ಲಿ ಇಂಗ್ಲಿಷ್ ಮ್ಯಾಗಜಿನ್ ಒಂದರಲ್ಲಿ ಪ್ರಕಟವಾದ ಲೇಖನದ ಎಳೆಯನ್ನು ತೆಗೆದುಕೊಂಡು, ಅದಕ್ಕೆ ಕಾಲ್ಪನಿಕ ಸ್ಪರ್ಶ ನೀಡಿ ಈ ಸಿನಿಮಾದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಬಿರಾದಾರ್, ಮೇಘನ ಬೆಳವಾಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಕಾಶ್ ಬೆಳವಾಡಿ, ಶ್ರೀಕಾಂತ್, ಯಶವಂತ ಕುಚಬಾಳ, ಶಿವಮೊಗ್ಗ ರಾಮಣ್ಣ, ಅಶ್ವಿನ್ ಹಾಸನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ರಾಮಚಂದ್ರ ಹಡಪದ ಸಂಗೀತ, ವಿಜಯ್ ರುಡಾಲ್ಫ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು ಹಾಗೂ ನಾಗರಹೊಳೆ ದಟ್ಟ ಅರಣ್ಯದಲ್ಲಿ ಚಿತ್ರೀಕರಣ ನಡೆದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಂಡ ತೊಡಗಿಸಿಕೊಂಡಿದೆ. ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.