The Rise of Ashoka; ‘ಅಶೋಕ ಬ್ಲೇಡ್’ ಈಗ ‘ದಿ ರೈಸ್ ಆಫ್ ಅಶೋಕ’; ಸದ್ಯದಲ್ಲೇ ಚಿತ್ರೀಕರಣ

ಸತೀಶ್ ನೀನಾಸಂ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ‘ಅಶೋಕ ಬ್ಲೇಡ್’ ಚಿತ್ರ ಪ್ರಾರಂಭವಾಗಿದ್ದು ನೆನಪಿರಬಹುದು. ಚಿತ್ರದ ಚಿತ್ರೀಕರಣ ಸಹ ಬಹುತೇಕ ಮುಗಿದಿತ್ತು. ಆದರೆ, ಆ ಚಿತ್ರದ ಬಜೆಟ್ ಹೆಚ್ಚಾದ್ದರಿಂದ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ವಿನೋದ್ ಧೋಂಡಾಳೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡರು. ಇನ್ನು, ಚಿತ್ರ ಪ್ರಾರಂಭವಾಗುವುದಿಲ್ಲ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಚಿತ್ರ ಪುನಃ ಶುರುವಾಗುತ್ತಿರುವ ಸುದ್ದಿ ಇದೆ.

‘ಅಶೋಕ ಬ್ಲೇಡ್’ ಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೆಸರನ್ನು ಇಡಲಾಗಿದ್ದು, ಈ ಶೀರ್ಷಿಕೆಯಲ್ಲೇ ಚಿತ್ರ ಬಿಡುಗಡೆಯಾಗಲಿದೆ. ವಿನೋದ್ ದೊಂಡಾಲೆ ಆಗಲೇ ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದಾರಂತೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ಇದೀಗ ಈ ಚಿತ್ರವನ್ನು ಮನು ಶೇಡ್ಗಾರ್ ಮುಂದುವರೆಸುತ್ತಿದ್ದಾರೆ. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ದಿ ರೈಸ್ ಆಫ್ ಅಶೋಕ’ ಚಿತ್ರದ ಉಳಿದ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರಂತೆ.
‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿರುವ ಮತ್ತು ಹೆಸರು ಬದಲಾದ ವಿಷಯವನ್ನು ಒಂದು ಮೋಷನ್ ಪೋಸ್ಟರ್ ಮೂಲಕ ಘೋಷಿಸಲಾಗಿದೆ. ಈ ಮೋಷನ್ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು, ಇದು ರೆಟ್ರೋ ಕಾಲದ ಕಥೆ ಅನ್ನೋದನ್ನು ಹೇಳುತ್ತದೆ. ಈ ಚಿತ್ರದ ಮೂಲಕ ಒಂದು ಬಂಡಾಯದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಕಥೆಗಾರ ಟಿ.ಕೆ. ದಯಾನಂದ್.
ಫೆಬ್ರವರಿ 15ರಿಂದ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ. ಈ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್, ‘ರೈಸ್ ಆಫ್ ಅಶೋಕ’ ಚಿತ್ರವನ್‍ನು ನಿರ್ಮಾಣ ಮಾಡುತ್ತಿದ್ದಾರೆ.
‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆಗೆ ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.