Arjun Janya’s 45 The Movie Teaser; ಕಮರ್ಷಿಯಲ್‍ ಚಿತ್ರದಲ್ಲಿ ತತ್ವ ಹೇಳೋಕೆ ಹೊರಟ ಅರ್ಜುನ್‍; ‘45’ ಟೀಸರ್ ಬಿಡುಗಡೆ

ಸಂಕ್ರಾಂತಿ ಹಬ್ಬಕ್ಕೆ ‘45’ ಚಿತ್ರದ ಒಂದು ಟೀಸರ್ ಬಿಡಗಡೆಯಾಗಿತ್ತು. ಈಗ ಯುಗಾದ ಹಬ್ಬಕ್ಕೆ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ. ಮೊದಲ ಟೀಸರ್‍ನಲ್ಲಿ ಶಿವರಾಜಕುಮಾರ್ ಪಾತ್ರವನ್ನು ಪರಿಚಯಿಸಿದ್ದ ನಿರ್ದೇಶಕ ಅರ್ಜುನ್‍ ಜನ್ಯ, ಈ ಬಾರಿ ಮೂರು ಪಾತ್ರಗಳನ್ನು ಪರಿಚಯಿಸಿದ್ದಾರೆ.

ಒರಾಯನ್‍ ಮಾಲ್‍ನ ಪಿವಿಆರ್‌ನಲ್ಲಿ ನಡೆದ ಈ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ, ಅರ್ಜುನ್‍ ಜನ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದು ನನಗೆ ಬಹಳ ಇಷ್ಟವಾದ ಸಿನಿಮಾ. ಇದರಲ್ಲಿ ಹಲವು ವಿಷಯಗಳಿವೆ. ಇದರಲ್ಲಿ ಅವರು ಹೈಲೈಟು, ಇವರು ಹೈಲೈಟ್ ಅಂತಿಲ್ಲ. ಇಡೀ ಚಿತ್ರವೇ ಹೈಲೈಟ್‍. ನಮ್ಮ ಮೂವರು ಪಾತ್ರಗಳಿಗೂ ಪ್ರೀತಿ ಇದೆ, ಅಹಂಕಾರವಿಲ್ಲ. ಪಾತ್ರ ನೋಡಿದಾಗ ಅಹಂಕಾರ ಅಂತನಿಸಿದರೂ ಪ್ರೀತಿ ಜಾಸ್ತಿ ಇದೆ. ಇದು ಇನ್ನೊಂದು ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಈ ಚಿತ್ರವನ್ನು ಅರ್ಜುನ್‍ ಜನ್ಯ ಮಾಡದಿದ್ದರೆ, ಒಬ್ಬ ಒಳ್ಳೆಯ ನಿರ್ದೇಶಕರನ್ನು ಮಿಸ್‍ ಮಾಡಿಕೊಳ್ಳುತ್ತಿದ್ದೆವು. ಬರೀ ಕನ್ನಡಕ್ಕಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ನಿರ್ದೇಶಕರಾಗುತ್ತಾರೆ’ ಎಂದರು.

ಶಿವಣ್ಣ ಪ್ರೋತ್ಸಾಹ ಕೊಟ್ಟು ಪ್ರಾರಂಭಿಸಿದ ಚಿತ್ರ ಇದು ಎಂದ ಉಪೇಂದ್ರ, ‘ಪ್ರೋತ್ಸಾಹ ಸಿಗೋದು ತುಂಬಾ ದೊಡ್ಡ ವಿಷಯ. ಶಿವರಾಜಕುಮಾರ್ ಅವರ ಪ್ರೋತ್ಸಾಹದಿಂದ ಈ ಚಿತ್ರವಾಗಿದೆ. ಅರ್ಜುನ್‍ ಒಬ್ಬ ಒಳ್ಳೆಯ ತಂತ್ರಜ್ಞ. ಪ್ರತಿಯೊಂದನ್ನೂ ಅವರೇ ನಟನೆ ಮಾಡಿ ತೋರಿಸಿದರು. ಅವರೇ ಎಲ್ಲ ಮಾಡ್ತಾರಲ್ಲ, ನಾನೇನು ಮಾಡಲಿ ಎಂದನಿಸಿತು. ಇದು ಮಲ್ಟಿ ಸ್ಟಾರ್‌ ಸಿನಿಮಾ ಎನ್ನುತ್ತಾರೆ. ನಿಜವಾದ ಮಲ್ಟಿಸ್ಟಾರ್ ಎಂದರೆ ಅದು ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕ’ ಎಂದರು.

ತಾನು ಸ್ಟಾರ್ ಅಲ್ಲ, ಶಿವರಾಜಕುಮಾರ್‍ ಮತ್ತು ಉಪೇಂದ್ರ ಅವರೇ ನಿಜವಾದ ಸ್ಟಾರ್‌ಗಳೆಂದ ರಾಜ್‍ ಶೆಟ್ಟಿ, ‘ಅವರು ನಿಜವಾದ ಸ್ಟಾರ್‌ಗಳು. ನಾನು ನಿನ್ನೆ-ಮೊನ್ನೆ ಬಂದವನು. 10 ವರ್ಷ ಸಹ ಚಿತ್ರರಂಗದಲ್ಲಿ ಕಳೆದಿಲ್ಲ. ಬರೀ ನಟಿಸಿದೆ ಎನ್ನುವ ಕಾರಣಕ್ಕೆ ನಾನು ಈ ಚಿತ್ರದ ಮೂರನೇ ಸೂಪರ್ ಸ್ಟಾರ್ ಅಲ್ಲ. ಅವರಿಬ್ಬರು ಸೂಪರ್‍ ಸ್ಟಾರ್‌ಗಳು ಮತ್ತು ನಾನು ಈ ಚಿತ್ರದಲ್ಲಿ ಒಬ್ಬ ನಟ ಅಷ್ಟೇ. ಪ್ರತೀ ಸಾರಿ ಸ್ಟಾರ್ ಎಂದಾಗಲೂ ನನಗೆ ಬಹಳ ನಾಚಿಕೆಯಾಗುತ್ತದೆ. ಅವರಿಬ್ಬರೂ ತೆರೆಯ ಮೇಲೆ ಬರುವಾಗ, ನಾನು ಕೂತು ವಿಷಲ್‍ ಹೊಡೆಯೋದು ನನ್ನ ಭಾಗ್ಯ’ ಎಂದರು.

ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳ ಮೂಲಕ ಫಿಲಾಸಫಿ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದ ಅರ್ಜುನ್‍, ‘ಒಂದೊಳ್ಳೆಯ ವಿಷಯವನ್ನು ಕಮರ್ಷಿಯಲ್‍ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಇರಲಿದೆ. ಗ್ರಾಫಿಕ್ಸ್ ಕೆಲಸ ನಡೆಯುತ್ತಿದ್ದು, ಆಗಸ್ಟ್ 15ರಂದು ಚಿತ್ರ ಬಿಡಗಡೆಯಾಗಲಿದೆ’ ಎಂದರು.

ಸೂರಜ್‍ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್‍ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.

(Renowned music composer Arjun Janya is making his directorial debut with the film “45,” featuring an ensemble cast including Dr. Shivarajkumar, Upendra, and Raj B. Shetty.)

One thought on “Arjun Janya’s 45 The Movie Teaser; ಕಮರ್ಷಿಯಲ್‍ ಚಿತ್ರದಲ್ಲಿ ತತ್ವ ಹೇಳೋಕೆ ಹೊರಟ ಅರ್ಜುನ್‍; ‘45’ ಟೀಸರ್ ಬಿಡುಗಡೆ

Leave a Reply

Your email address will not be published. Required fields are marked *