Ganesh; ಗಣೇಶ್ ಹೊಸ ಚಿತ್ರಕ್ಕೆ ‘ಹನು ಮ್ಯಾನ್’ ಖ್ಯಾತಿಯ ಅಮೃತ ಅಯ್ಯರ್ ನಾಯಕಿ

ಸದ್ಯ ‘ಯುರ್ಸ್ ಸಿನ್ಸಿಯರ್ಲಿ ರಾಮ್’ ಮತ್ತು ‘ಪಿನಾಕ’ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಗಣೇಶ್, ಇದೀಗ ಹೊಸ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಗೀತರಚನೆಕಾರ ಮತ್ತು ಈ ಹಿಂದೆ `ಲವ್ ಇನ್ ಮಂಡ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಅರಸು ಅಂತಾರೆ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
2014ರಲ್ಲಿ ಬಿಡುಗಡೆಯಾದ ‘ಲವ್ ಇನ್ ಮಂಡ್ಯ’ ಚಿತ್ರದ ನಂತರ ಅರಸು ಅಂತಾರೆ ಯಾವೊಂದು ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಹಲವು ಚಿತ್ರಗಳಿಗೆ ಹಾಡುಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದ ಅರಸು, ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೊತೆಗೆ ಕನ್ನಡ ಚಿತ್ರರಂಗದ ಜನಪ್ರಿಯ ನಟ-ನಟಿಯರು ಇರಲಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ತೆಲುಗಿನ ‘ಹನು ಮ್ಯಾನ್’ ಚಿತ್ರದ ಖ್ಯಾತಿಯ ಅಮೃತ ಅಯ್ಯರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅಮೃತ ಅಯ್ಯರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಏಪ್ರಿಲ್ 6 ರಂದು ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಏಪ್ರಿಲ್ 7 ರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. SNT ಎಂಟರ್ಪ್ರೈಸಸ್ ಲಾಂಛನದಲ್ಲಿ ರವಿ ನಿರ್ಮಿಸುತ್ತಿರುವ ಈ ಚಿತ್ರ ಕೌಟುಂಬಿಕ ಕಥಾಹಂದರ ಹೊಂದಿದೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನವಿದೆ.
ಚಿತ್ರದ ಹೆಸರೇನು? ಯಾರೆಲ್ಲಾ ನಟಿಸುತ್ತಿದ್ದಾರೆ? ವಿಶೇಷತೆಗಳೇನು? ಎಂಬ ವಿಷಯಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದ್ದು, ಇನ್ನಷ್ಟೇ ಹೆಚ್ಚಿನ ವಿಷಯಗಳನ್ನು ಹಂಚಿಕೊಳ್ಳಬೇಕಿದೆ.