Anurag Kashyap; ಅನುರಾಗ್ ಕಶ್ಯಪ್‍ಗೆ ‘8’ರ ನಂಟು; ಕನ್ನಡ ಚಿತ್ರದಲ್ಲಿ ನಂಟು

ಬಾಲಿವುಡ್ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಅನುರಾಗ್ ಕಶ್ಯಪ್, ಇತ್ತೀಚಿನ ದಿನಗಳಲ್ಲಿ ನಿರ್ದೇಶನಕ್ಕಿಂತ ನಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
AVR ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ‘8’ ಎಂಬ ಹೊಸ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದು, ‘ಬಿಗ್ ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ.
ಫುಟ್ಬಾಲ್ ಹಿನ್ನೆಲೆಯ ಈ ಕಥೆಯಲ್ಲಿ ಅನುರಾಗ್ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದ ಕುರಿತು ಮಾತನಾಡಿರುವ ಅವರು, ‘ಇದೊಂದು ಎಮೋಷನಲ್ ಕಥೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಜೀವನ ಮುಗಿಯಿತು ಎನ್ನುವಷ್ಟರಲ್ಲಿ ಒಂದು ಅವಕಾಶ ಬೇರೆ ರೀತಿಯಲ್ಲಿ ಸಿಗುತ್ತದೆ. ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತದೆ. ನನ್ನ ಮಟ್ಟಿಗೆ ಇದು ಹೊಸ ಪ್ರಯತ್ನ. ಎಲ್ಲರೂ ನನಗೆ ಸೈಕೋಪಾತ್ ಪಾತ್ರಗಳನ್ನೇ ಕೊಡುತ್ತಾರೆ. ಆದರೆ, ಸುಜಯ್ ನನಗೆ ಬೇರೊಂದು ಪಾತ್ರವನ್ನು ಕೊಟ್ಟಿದ್ದಾರೆ’ ಎಂದರು.
ಈ ಚಿತ್ರ ಒಪ್ಪುವುದಕ್ಕೆ ಮೊದಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾಗಿ ಹೇಳುವ ಅನುರಾಗ್, ‘ಇಂಥದ್ದೊಂದು ಕಥೆಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಇತ್ತು. ಆದರೆ, ಈ ಕಥೆಯನ್ನು ಸರಿಯಾಗಿ ಮಾಡಿದರೆ, ಚಿತ್ರ ದೊಡ್ಡ ಮಟ್ಟಕ್ಕೆ ಗೆಲ್ಲುತ್ತದೆ ಎಂದು ನಿರ್ಮಾಪಕರು ಹೇಳಿದರು. ಅವರು ಧೈರ್ಯ ಕೊಟ್ಟಿದ್ದರಿಂದ, ನಾನು ಈ ಚಿತ್ರದ ಭಾಗವಾದೆ’ ಎಂದರು.
ಬಾಲಿವುಡ್‍ನಲ್ಲಿ ಕೆಲಸ ಮಾಡಲು ಕಷ್ಟವಾಗಿರುವುದರಿಂದ, ಮುಂದಿನ ದಿನಗಳಲ್ಲಿ ದಕ್ಷಿಣದಲ್ಲಿ ನೆಲೆಗೊಳ್ಳುವ ಬಗ್ಗೆ ಅನುರಾಗ್ ಕಶ್ಯಪ್ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು. ಅದಕ್ಕೆ ಸರಿಯಾಗಿ ಇತ್ತೀಚಿನ ದಿನಗಳಲ್ಲಿ ಅವರು ದಕ್ಷಿಣ ಚಿತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹಾಗಾದರೆ, ಬಾಲಿವುಡ್‍ನಿಂದ ಅನುರಾಗ್ ಖಾಯಮ್ಮಾಗಿ ದೂರಾಗುತ್ತಾರಾ? ಕಾದು ನೋಡಿ.

(Anurag Kashyap Kannada acting debut will be directed by Sujay Shastry and produced by Arvind Venkatesh Reddy, under the banner of AVR Entertainment. Kashyap played the villain in the Vijay Sethupathi starrer Maharaja and the Malayalam action drama Rifle Club.)