ಕೆಂಪೇಗೌಡರ ಕುರಿತು ಇನ್ನೊಂದು ಚಿತ್ರ; ಈ ಬಾರಿ AI ತಂತ್ರಜ್ಞಾನದಲ್ಲಿ

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಚಿತ್ರ ಮಾಡುವ ಪ್ರಯತ್ನಗಳ ಬಗ್ಗೆ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಆದರೆ, ಇದುವರೆಗೂ ಯಾವೊಂದು ಚಿತ್ರ ಸಹ ಸೆಟ್ಟೇರಿಲ್ಲ. ಇದೀಗ ಕನ್ನಡದಲ್ಲಿ AI ತಂತ್ರಜ್ಞಾನದಲ್ಲಿ ಕೆಂಪೇಗೌಡರ ಜೀವನ ಚರಿತ್ರೆಯನ್ನಾಧರಿಸಿದ ಚಿತ್ರ ಮೂಡಿಬರುತ್ತಿದೆ.

ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ (Kannada Film Industry) ‘ಲವ್‍ ಯೂ’(Love You) ಚಿತ್ರವು ಇಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು AI ಮೂಲಕ ಸೃಷ್ಟಿಸಿರುವ ನೂತನ್‍, ಕೆಂಪೇಗೌಡರ ಕುರಿತು ಚಿತ್ರ ಮಾಡುವುದಕ್ಕೆ ಮುಂದಾಗಿದೆ.

ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕುರಿತು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಎಂಬ ಚಿತ್ರವನ್ನು ಮೊದಲು ಘೋಷಿಸಿದ್ದು ಹಿರಿಯ ನಿರ್ದೇಶಕ ದಿನೇಶ್‍ ಬಾಬು. ಅದಾದ ನಂತರ ಹಿರಿಯ ನಿರ್ದೇಶಕ ನಾಗಾಭರಣ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ‘ನಾಡಪ್ರಭು ಕೆಂಪೇಗೌಡ’ ಎಂಬ ಚಿತ್ರವನ್ನು ನಿರ್ದೇಶಿಸುವುತ್ತಿರುವುದಾಗಿ ಹೇಳಿದರು. ಆ ಚಿತ್ರದಲ್ಲಿ ಧನಂಜಯ್‍, ಕೆಂಪೇಗೌಡರ ಪಾತ್ರ ಮಾಡುತ್ತಿದ್ದಾರೆ. ಆದರೆ, ಎರಡರ ಪೈಕಿ ಯಾವ ಚಿತ್ರವೂ ಇದುವರೆಗೂ ಪ್ರಾರಂಭವಾಗಿಲ್ಲ.

ಹೀಗಿರುವಾಗಲೇ, ಕೆಂಪೇಗೌಡರ ಕುರಿತು ನೂತನ್‍ AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಹೊಸ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅವರು ತಯಾರಿಯನ್ನೂ ನಡೆಸಿದ್ದಾರೆ. ಕೆಂಪೇಗೌಡರ ಜನ್ಮದಿನವಾದ ಜೂನ್‍ 27ರಂದು ಚಿತ್ರದ ಟೀಸರ್‍ ಬಿಡುಗಡೆ ಆಗುವ ಸಾಧ್ಯತೆಯೂ ಇದೆ.

ಈ ಕುರಿತು ಮಾತನಾಡುವ ನೂತನ್‍, ‘ಮರಾಠಿಯಲ್ಲಿ ಶಿವಾಜಿ ಮಹಾರಾಜರ ಕುರಿತು ಹಲವು ಚಿತ್ರಗಳು ಬಂದಿವೆ. ನಾವು ಕಲಾವಿದರನ್ನು ಬಳಸಿಕೊಂಡು ಚಿತ್ರ ಮಾಡಿದರೆ, ಕೋಟ್ಯಂತರ ಖರ್ಚಾಗುತ್ತದೆ. ಸಾಕಷ್ಟು ಸಮಯವೂ ಬೇಕಾಗುತ್ತದೆ. ಆದರೆ, ನಮಗೆ ಅಷ್ಟೊಂದು ಸಮಯ ಕಾಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಇನ್ನು, ‘ಲವ್‍ ಯು’ ಚಿತ್ರದ ಕುರಿತು ಮಾತನಾಡುವ ನೂತನ್‍, ‘ಆರು ತಿಂಗಳ ಹಿಂದೆ ನಾವು ಈ ಚಿತ್ರ ಮಾಡಿದಾಗ, ಹೆಚ್ಚು ಸೌಲಭ್ಯಗಳಿರಲಿಲ್ಲ. ಹಾಗಾಗಿ, ಚಿತ್ರದಲ್ಲಿ ಸಾಕಷ್ಟು ನ್ಯೂನತೆಗಳಿರಬಹುದು. ಈಗ ಸಾಕಷ್ಟು ಬೆಳವಣಿಗೆಗಳಾಗಿದ್ದು, ಮುಂದಿನ ದಿನಗಳಲ್ಲಿ AI ತಂತ್ರಜ್ಞಾನದಲ್ಲಿ ಇನ್ನಷ್ಟು ಅದ್ಭುತ ಪ್ರಯತ್ನಗಳನ್ನು ಮಾಡಬಹುದು. ಇಡೀ ದೇಶದಲ್ಲಿ ಕನ್ನಡದಲ್ಲಿ ಮೊದಲು ಇಂಥದ್ದೊಂದು ಪ್ರಯತ್ನವಾಗಲೀ ಎಂಬ ಕಾರಣಕ್ಕೆ ನಾವು ಚಿತ್ರ ಮಾಡಿದ್ದೇವೆ’ ಎನ್ನತ್ತಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

Leave a Reply

Your email address will not be published. Required fields are marked *