19 ವರ್ಷಗಳ ಬಳಿಕ ಮತ್ತೆ ಮರುಬಿಡುಗಡೆ ಆಗಲಿದೆ ‘Cyanide’

cyanide movie

ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರವೆಂದರೆ ಅದು ಎ.ಎಂ.ಆರ್. ರಮೇಶ್‍ ನಿರ್ದೇಶನದ ‘ಸೈನೈಡ್‍’ (cyanide movie). ಈ ಚಿತ್ರವು 2006-07ನೇ ಸಾಲಿನ ರಾಜ್ಯ ಪ್ರಶಸ್ತಿ ಕಣದಲ್ಲಿ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ಈ ಚಿತ್ರವು ತನ್ನ ವಿಭಿನ್ನ ನಿರೂಪಣೆ ಮತ್ತು ಅಭಿನಯದಿಂದ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ್ಯಾಕೆ ‘ಸೈನೈಡ್’ ವಿಷಯವೆಂದರೆ, 19 ವರ್ಷಗಳ ಹಿಂದೆ ಬಿಡುಗಡೆಯಾಗಿ, ಜನಮನ್ನಣೆ ಪಡೆದಿದ್ದ ‘ಸೈನೈಡ್‍’ ಈಗ ಮರುಬಿಡುಗಡೆ ಆಗುತ್ತಿದೆ. ಮೇ 23ರಂದು ಚಿತ್ರವು ಹೊಸ ತಂತ್ರಜ್ಞಾನದ ಜೊತೆಗೆ 10 ನಿಮಿಷಗಳ ಇನ್ನಷ್ಟು ಫುಟೇಜ್‍ ಜೊತೆಗೆ ಹೊಸದಾಗಿ ತೆರೆಕಾಣುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವುದರ ಜೊತೆಗೆ, ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ರಮೇಶ್, ‘ಸೈನೈಡ್’ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆ ಆಧರಿಸಿದ ಚಿತ್ರ.‌ 2006ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಆತಂಕವಿತ್ತು. ಏಕೆಂದರೆ, ಇದೊಂದು ಸೂಕ್ಷ್ಮವಾದ ವಿಷಯದ ಕುರಿತಾದ ಚಿತ್ರ. ಆದರೆ, ಬಿಡುಗಡೆ ಆದ ನಂತರ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ನಾಡಿನ ಖ್ಯಾತ ಸಾಹಿತಿಗಳು, ನಟರು ಹಾಗೂ‌ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು. ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ‌ ಮರು ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ತಮ್ಮ ಅಭಿನಯಕ್ಕಾಗಿ ತಾರಾ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಸಿಕ್ಕಿದ್ದು, ಅವರು ಈ ಚಿತ್ರದಲ್ಲಿ ಮೃದುಲ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ನಿರ್ವಹಿಸಿದ್ದರು. ‘ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟೆ. ಆದರೆ, ಅದು ಆಗಲಿಲ್ಲ. ಅವರ ಪತಿ ರಂಗನಾಥ್ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು.‌ ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.

ಅಕ್ಷಯ್ ಕ್ರಿಯೇಷನ್ಸ್ ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್. ಇಂದುಮತಿ ನಿರ್ಮಿಸಿದ್ದ, ‘ಸೈನೈಡ್‍’ ಚಿತ್ರದಲ್ಲಿ ಚಿತ್ರದಲ್ಲಿ ತಾರಾ, ರಂಗಾಯಣ ರಘು, ರವಿ ಕಾಳೆ, ಮಾಳವಿಕಾ ಅವರಿನಾಶ್‍, ಅವಿನಾಶ್, ಉಷಾ ಭಂಡಾರಿ, ಸುರೇಶ್‍ ಹೆಬ್ಳೀಕರ್‌, ನಾಸರ್‌ ಮುಂತಾದವರು ಅಭಿನಯಿಸಿದ್ದರು.

ವಿಶೇಷವೆಂದರೆ, ‘ಸೈನೈಡ್’ ಚಿತ್ರದ ಪ್ರೀಕ್ವೆಲ್ ಮಾಡುವ ಕುರಿತು ರಮೇಶ್‍ ಸಿದ್ಧತೆ ನಡೆಸಿದ್ದು, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆಯಂತೆ. ತಮಿಳು ನಟ ಅರವಿಂದ್‍ ಸ್ವಾಮಿ, ರಾಜೀವ್‍ ಗಾಂಧಿ ಅವರ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “19 ವರ್ಷಗಳ ಬಳಿಕ ಮತ್ತೆ ಮರುಬಿಡುಗಡೆ ಆಗಲಿದೆ ‘Cyanide’

Leave a Reply

Your email address will not be published. Required fields are marked *