Veera Kambala; ದುಬೈನಲ್ಲಿ ಚಿತ್ರೀಕರಣ ಮುಗಿಸಿ ಮರಳಿದ ರಾಜೇಂದ್ರ ಸಿಂಗ್ ಬಾಬು

ದಕ್ಷಿಣ ಕನ್ನಡದ ಪ್ರಸಿದ್ಧ ಕ್ರೀಡೆ ಕಂಬಳವನ್ನೇ ಮುಖ್ಯವಾಗಿಟ್ಟುಕೊಂಡು ಹಿರಿಯ ನಿರ್ದೇಶಕ ಎಸ್. ವಿ ರಾಜೇಂದ್ರ ಸಿಂಗ್ ಬಾಬು ಅವರು ವೀರ ಕಂಬಳ (Veera Kambala) ಸಿನಿಮಾ ಮಾಡುತ್ತಿದ್ದಾರೆ. ಅರುಣ್ ರೈ ತೊಡರ್ ಅವರು ಈ ಚಿತ್ರವನ್ನು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ತಂಡ ದೂರದ ದುಬೈನಲ್ಲಿ ಚಿತ್ರೀಕರಣ ಮುಗಿಸಿ ತವರಿಗೆ ಮರಳಿದೆ. ನಟ ಆದಿತ್ಯ, ನಿರ್ಮಾಪಕ ಅರುಣ್ ರೈ ತೊಡರ್, ಶೋಭ್ ರಾಜ್ ಮುಂತಾದವರು ದುಬೈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಕಂಬಳ ಕ್ರೀಡೆಯನ್ನೇ ಮುಖ್ಯವಾಗಿಟ್ಟುಕೊಂಡು ರಾಜೇಂದ್ರ ಸಿಂಗ್ ಬಾಬು ಅವರು ವೀರ ಕಂಬಳ ಚಿತ್ರದ ಕಥೆ ಬರೆದಿದ್ದಾರೆ. ಈ ಚಿತ್ರ ಕನ್ನಡದಲ್ಲಿ ವೀರ ಕಂಬಳ ಎಂಬ ಹೆಸರಿನಿಂದ ಹಾಗೂ ತುಳುವಿನಲ್ಲಿ ಬಿರ್ದುದ ಕಂಬಳ ಎಂಬ ಹೆಸರಿನಲ್ಲಿ ಮೂಡಿ ಬರಲಿದೆ.
ಮಂಗಳೂರು, ಮೂಡುಬಿದಿರೆ ಹಾಗೂ ಬೆಂಗಳೂರು, ದುಬೈನಲ್ಲಿ ಚಿತ್ರೀಕರಣ ನಡೆದಿದ್ದು, ಛಾಯಾಗ್ರಹಣದ ಕೆಲಸ ಬಹುತೇಕ ಮುಕ್ತಾಯವಾಗಿದೆ. ಮಂಗಳೂರಿನ ಒಂದು ಕುಟುಂಬ ಕಂಬಳ ನಡೆಸುವುದು ನಂತರ ಅದೇ ಕುಟುಂಬ ದುಬೈಗೆ ಹೋಗಿ ನೆಲೆಸುದರ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. ಹೀಗಾಗಿ ಮರಳುಗಾಗಿನ ನಾಡಾದ ದುಬೈನಲ್ಲೂ ಚಿತ್ರೀಕರಣ ಮಾಡಿದ್ದಾರೆ. ಏಪ್ರಿಲ್ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಚಿಂತಿಸುತ್ತಿದೆ.
ವೀರ ಕಂಬಳಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಬರೆದರೆ, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸ ನಿರ್ದೇಶನ, ಚಂದ್ರಶೇಖರ ಸುವರ್ಣ ಮುಲ್ಕಿ ಕಲಾ ನಿರ್ದೇಶನ ಇದೆ.
ಆದಿತ್ಯ, ಪ್ರಕಾಶ್ ರೈ, ರವಿಶಂಕರ್, ಶೋಭ್ ರಾಜ್, ನವೀನ್ ಪಡಿಲ್, ಗೋಪಿನಾಥ್ ಭಟ್, ರಾಧಿಕಾ ಚೇತನ್, ಅರುಣ್ ರೈ ತೊಡರ್, ಭೋಜರಾಜ್ ವಾಮಂಜೂರು, ಉಷಾ ಭಂಡಾರಿ, ಮೈಮ್ ರಮೇಶ್, ಗೀತಾ ಸುರತ್ಕಲ್ ಮತ್ತು ಸುರೇಶ್ ಶೆಟ್ಟಿ ಅವರನ್ನೊಳಗೊಂಡ ತಾರಾಗಣ ಚಿತ್ರಕ್ಕಿದೆ.