BIFFESನ ರಾಯಭಾರಿಯಾಗಿ ನಟ ಕಿಶೋರ್ ನೇಮಕ

ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿ ಮಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕುರಿತಾಗಿ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇದೀಗ ಚಿತ್ರೋತ್ಸವ ಸಮಿತಿಯಿಂದ ಇನ್ನೊಂದು ಸುದ್ದಿ ಬಂದಿದ್ದು, ನಟ ಕಿಶೋರ್ ಈ ಬಾರಿ ಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಮೂಲದ ಕಿಶೋರ್, ತೆಲುಗು ಮತ್ತು ತಮಿಳು ಸೇರಿದಂತೆ ಬೇರೆ ಭಾಷೆಯ ಚಿತ್ರಗಳಲ್ಲೂ ತಮ್ಮ ಪ್ರತಿಭೆಯಿಂದ ಹೆಸರು ಮಾಡಿದವರು. ಇದೀಗ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಬಾರಿ ನಟ ಧನಂಜಯ್ ರಾಯಭಾರಿಯಾಗಿದ್ದು, ಈ ಬಾರಿ ಕಿಶೋರ್ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
‘ಕಂಠಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಕಿಶೋರ್, ನಂತರದ ವರ್ಷಗಳಲ್ಲಿ ‘ರಾಕ್ಷಸ’, ‘ಇಂತಿ ನಿನ್ನ ಪ್ರೀತಿಯ’, ‘ಬಿರುಗಾಳಿ’, ‘ವಾಸ್ಕೋಡಿಗಾಮ’, ‘ಕಿರಗೂರಿನ ಗಯ್ಯಾಳಿಗಳು’, ‘ಕಾಂತಾರ’, ‘ಯುವ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡವಲ್ಲದೆ, ‘ವೆಟ್ಟಯ್ಯಾನ್’, ‘ಜೈಲರ್’, ‘ಪೊನ್ನಿಯನ್ ಸೆಲ್ವನ್’, ‘ಆಚಾರ್ಯ’, ‘ವೆಂಕಿ ಮಾಮ’, ‘ಕಣ್ಣೂರು ಸ್ಕ್ವಾಡ್’ ಸೇರಿದಂತೆ ಹಲವು ಪರಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ.
2024-2025ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2025ರ ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. BIFFES, ಬೆಲ್ಜಿಯಂ ನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, ಸುಮಾರು ಎಂಟು ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿದು. ಇದರಲ್ಲಿ ದೇಶ-ವಿದೇಶಗಳ ಜನಪ್ರಿಯ ಚಿತ್ರಗಳ ಪ್ರದರ್ಶನವಾಗುವುದರ ಜೊತೆಗೆ, ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು, ವಿಚಾರ ಸಂಕಿರಣ ಸೇರಿದಂತೆ ಚಿತ್ರರಂಗಕ್ಕೆ ಪೂರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಶೀರ್ಷಿಕೆಯಡಿ ನಡೆಯಲಿದ್ದು, ಈ ಪರಿಕಲ್ಪನೆಯೊಂದಿಗೆ ಚಿತ್ರಗಳು ಪ್ರಸಾರವಾಗಲಿವೆ. ಈ ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಸಿನಿಮಾ ರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
Actor Kishore has been named as the brand ambassador for the 16th edition of the Bengaluru International Film Festival (BIFFes)