Priyanka Achar; ರಾಣಗೆ ನಾಯಕಿಯಾದ ‘ಮಹಾನಟಿ’ ವಿಜೇತೆ ಪ್ರಿಯಾಂಕಾ ಆಚಾರ್

ರಕ್ಷಿತಾ (Rakshita) ಸಹೋದರ ರಾಣ, ‘ಏಕ್ ಲವ್ ಯಾ’ ಚಿತ್ರದ ನಂತರ ತರುಣ್ ಸುಧೀರ್ (Tarun Sudheer) ಮತ್ತು ಅಟ್ಲಾಂಟ ನಾಗೇಂದ್ರ (Atlanta Nagendra) ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಈಗ ಈ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಂಕಾ ಆಚಾರ್ (Priyanka Achar) ಆಯ್ಕೆಯಾಗಿದ್ದಾರೆ.
‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ ಎಂಬ ಟ್ಯಾಗ್ಲೈನ್ ಇರುವ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನೈಜ ಘಟನೆಯೊಂದನ್ನು ಆಧರಿಸಿ ಪುನೀತ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೀಗ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾದ ‘ಮಹಾನಟಿ’ ಎಂಬ ರಿಯಾಲಿಟಿ ಕಾರ್ಯಕರಮದಲ್ಲಿ ವಿಜೇತರಾಗಿದ್ದವರು ಪ್ರಿಯಾಂಕಾ ಆಚಾರ್. ಇದೀಗ ಅವರು ತರುಣ್ ಸುಧೀರ್ ನಿರ್ಮಾಣದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಮಹಾನಟಿ’ ಕಾರ್ಯಕ್ರಮಕ್ಕೆ ತರುಣ್ ಸುಧೀರ್ ತೀರ್ಪುಗಾರರಾಗಿದ್ದರು. ಆಗಲೇ ಅವರು ಪ್ರಿಯಾಂಕಾ ಅಭಿನಯವನ್ನು ಮೆಚ್ಚಿಕೊಂಡಿದ್ದರು. ಇದೀಗ ಅವರದ್ದೇ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪ್ರಿಯಾಂಕಾಗೆ ಸಿಕ್ಕಿದೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ನಟಿಯಾಗಬೇಕು ಎಂಬ ಕನಸಿತ್ತಂತೆ. ಆ ಕನಸಿಗೆ ತರುಣ್ ನೀರೆರೆಯುತ್ತಿದ್ದಾರೆ.
ತರುಣ್ ಸುಧೀರ್ ಹೊಸ ನಾಯಕಿರಯನ್ನು ಪರಿಚಯಿಸುವುದರಲ್ಲಿ ಜನಪ್ರಿಯರು. ‘ರಾಬರ್ಟ್’ ಮೂಲಕ ಆಶಾ ಭಟ್, ‘ಕಾಟೇರ’ ಮೂಲಕ ಮಾಲಾಶ್ರೀ ಪುತ್ರಿ ಆರಾಧನ ರಾಮ್ ಅವರನ್ನು ನಾಯಕಿಯರನ್ನಾಗಿ ಕನ್ನಡ ಚಿತ್ರರಂಗಕ್ಕೆ ಅವರು ಪರಿಚಯಿಸಿದ್ದರು. ಇದೀಗ ತರುಣ್, ಪ್ರಿಯಾಂಕಾ ಆಚಾರ್ ಅವರನ್ನು ತಮ್ಮದೇ ನಿರ್ಮಾಣದ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಪರಿಚಯಿಸುತ್ತಿದ್ದಾರೆ.
ಇನ್ನೂ ಹೆಸರು ಘೋಷಣೆಯಾಗದ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಪ್ರಾರಂಭವಾಗಿದೆ.