Ragini Dwivedi; ಸೋಮನಹಳ್ಳಿಯಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ತೆರೆಯುತ್ತಿದ್ದಾರಂತೆ ರಾಗಿಣಿ

sarkari Nyaya Bele angadi

ಗೀತಪ್ರಿಯ ಅಭಿನಯದ ‘ತಾಯವ್ವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್‌ ಪವನ್‍ ಕುಮಾರ್‌ (Satvik Pavan Kumar) ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಇದುವರೆಗೂ ಸಾಕಷ್ಟು ಗ್ಲಾಮರಸ್‍ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಗಿಣಿ ದ್ವಿವೇದಿ, (Ragini Dwivedi) ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

 ಈಗಾಗಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಹುತೇಕ ಸ್ಕ್ರಿಪ್ಟ್‌ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನೆಮಾದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದೆ. ಅಷ್ಟೇ ಅಲ್ಲ, ಚಿತ್ರದ ಹಾಡುಗಳ ಧ್ವನಿಮುದ್ರಣ ಕೆಲಸ ಸಹ ಪ್ರಾರಂಭವಾಗಿದೆ. ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ (B. Ramamurthy) ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಮೂರು ಹಾಡುಗಳಿಗೆ ಅನಂತ್‌ ಆರ್ಯನ್‌ (Ananth Aryan) ಸಂಗೀತ ಸಂಯೋಜಿಸುತ್ತಿದ್ದಾರೆ.

 ಈ ಚಿತ್ರದ ಕುರಿತು ಮಾತನಾಡುವ ರಾಗಿಣಿ, ‘ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಕಥೆ ಮತ್ತು ಪಾತ್ರ ಈ ಚಿತ್ರದಲ್ಲಿದೆ. ಇಡೀ ಚಿತ್ರದ ಕಥೆ ನನ್ನ ಪಾತ್ರದ ಸುತ್ತ ನಡೆಯುತ್ತದೆ. ಇಂದಿನ ಸಮಾಜದಲ್ಲಿ ಆಹಾರ ವಿತರಣೆಯಲ್ಲೂ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಸಿನೆಮಾದಲ್ಲಿ ಹೇಳಲಾಗುತ್ತಿದೆ. ನಮಗೆ ಗೊತ್ತಿಲ್ಲದ ಶಾಕಿಂಗ್‌ ಎನಿಸುವಂಥ ಹಲವು ವಿಷಯಗಳು ಈ ಚಿತ್ರದಲ್ಲಿವೆ. ನನ್ನ ವೃತ್ತಿಜೀವನದಲ್ಲಿ ನಿಜವಾಗಿಯೂ ಇದೊಂದು ವಿಭಿನ್ನ ಚಿತ್ರವಾಗಲಿದೆ ಎಂಬ ನಂಬಿಕೆಯಿದೆ’ ಎಂದರು.

 ಇದೊಂದು ನೈಜ ವಿಷಯವನ್ನು ಆಧರಿಸಿದ ಚಿತ್ರ ಎನ್ನುವ ನಿರ್ದೇಶಕ ಸಾತ್ವಿಕ್‌ ಪವನ ಕುಮಾರ್‌, ‘ನಮ್ಮ ನಡುವೆಯಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ನೈಜ ವಿಷಯಗಳೇ ಈ ಚಿತ್ರದ ಕಥಾವಸ್ತು. ಇದನ್ನು ಒಂದಷ್ಟು ಕುತೂಹಲಭರಿತವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ರಾಗಿಣಿ ಅವರಿಗೆ ಇಲ್ಲೊಂದು ಹೊಸ ತರಹದ ಪಾತ್ರವಿದೆ.  ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ನಡೆಸುವ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಅವರಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.

ಜಯಶಂಕರ ಟಾಕೀಸ್‌ ಬ್ಯಾನರಿನಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್‌. ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಾರ್ಚ್‌ನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.

Leave a Reply

Your email address will not be published. Required fields are marked *