Simple Suni; ‘ರಿಚಿ ರಿಚ್‍’ ಆದ ಕಾರ್ತಿಕ್‍ ಮಹೇಶ್‍; ‘ಸಿಂಪಲ್’ ಸುನಿ ನಿರ್ದೇಶನದಲ್ಲಿ ಹೊಸ ಚಿತ್ರ

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ ಎ.ವಿ.ಆರ್ ಎಂಟರ್‍ಟೈನರ್ಸ್ (A. V. R Entertainers) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಬ್ಯಾನರ್ ಅಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ.

ಈ ಪೈಕಿ ‘ಸಿಂಪಲ್‍’ ಸುನಿ (Simple Suni) ಮತ್ತು ‘ಬಿಗ್‍ ಬಾಸ್‍’ (Bigg Boss) ಖ್ಯಾತಿಯ ಕಾರ್ತಿಕ್‍ ಮಹೇಶ್‍ (Karthik Mahesh) ಚಿತ್ರವೂ ಒಂದು. ಕಾರ್ತಿಕ್‍ ಇದಕ್ಕೂ ಮುನ್ನ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದರು. ಇದೀಗ ಅವರು ಸುನಿ ನಿರ್ದೇಶನದ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಈ ಚಿತ್ರಕ್ಕೆ ‘ರಿಚಿ ರಿಚ್’ ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದಲ್ಲಿ ಕಾರ್ತಿಕ್‍, ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಕೌಟಂಬಿಕ ಕಥೆ ಇರುವ ಈ ಚಿತ್ರಕ್ಕೆ ಸುನಿ ಕಥೆ ಬರೆದಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಅಭಿಲಾಷ್ ಕಳತ್ತಿ ಛಾಯಾಗ್ರಹಣವಿರಲಿದೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ.

AVR Entertainers ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರವನ್ನು ಸುಜಯ್‍ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ, ರಾಜ್‍ ಬಿ ಶೆಟ್ಟಿ ಅಭಿನಯದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಮತ್ತು ಚಂದನ್‍ ಶೆಟ್ಟಿ ಅಭಿನಯದ ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದರು. ಇದರಲ್ಲಿ ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಅದಕ್ಕೂ ಮೊದಲೇ ಸುಜಯ್ ಈ ಬಾರಿ ಕ್ರೀಡಾ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್‍ಕೆ ‘8’ ಎಂಬ ಹೆಸರನ್ನು ಇಡಲಾಗಿದ್ದು, ಇದೊಂದು ಫುಟ್ಬಾಲ್‍ ಹಿನ್ನೆಲೆಯ ಕಥೆಯಾಗಿದೆ. ಈ ಚಿತ್ರದ ನಾಯಕ ಯಾರು? ಅನ್ನೋದನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ‘ಟೀಂ ರೆಡಿ ಇದೆ. ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳೋದಾಗಿ’ ಚಿತ್ರತಂಡ ತಿಳಿಸಿದೆ.

Leave a Reply

Your email address will not be published. Required fields are marked *