Anamadheya Ashok Kumar; ಅನಾಮಧೇಯನ ಹೆಸರು ಅಶೋಕ್ ಕುಮಾರ್; ಫೆ. 07ಕ್ಕೆ ಕಿಶೋರ್ ಅಭಿನಯದ ಚಿತ್ರ

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಥ್ರಿಲ್ಲರ್ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಇದೀಗ ಕಿಶೋರ್ ಅಭಿನಯದ ‘ಅನಾಮಧೇಯ ಅಶೋಕ್ ಕುಮಾರ್’ (Anamadheya Ashok Kumar) ಸಹ ಒಂದು. ಈ ಚಿತ್ರದಲ್ಲಿ ಕಿಶೋರ್ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗುತ್ತಿದೆ.
‘ಅನಾಮಧೇಯ ಅಶೋಕ್ ಕುಮಾರ್’ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಒಬ್ಬ ಪತ್ರಕರ್ತ ಮತ್ತು ಪೊಲೀಸ್ ಅಧಿಕಾರಿಯ ಸುತ್ತ ಸುತ್ತುವ ಚಿತ್ರವಾಗಿದೆ. ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಆಚಾರ್ & ಕೋ’ ಚಿತ್ರದಲ್ಲಿ ನಟಿಸಿದ್ದ ಹರ್ಷಿಲ್ ಕೌಶಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಸಾಗರ್ ಕುಮಾರ್ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಬೆನ್ನಿ ಥಾಮಸ್ ಹಾಗೂ ಸಾಗರ್ ಕುಮಾರ್ ಬರೆದಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿರುವ ಸಾಗರ್ ಕುಮಾರ್ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದ ಕುರಿತು ಮಾತನಾಡುವ ಸಾಗರ್ ಕುಮಾರ್, ‘ಇದು ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ ನಡೆಯುವ ಕಥೆ. ಪ್ರಸಿದ್ದ ವಕೀಲರೊಬ್ಬರ ಕೊಲೆಯ ಸುತ್ತ ನಡೆಯುವ ಕಥೆ ಇದು’ ಎಂದು ಮಾಹಿತಿ ನೀಡುತ್ತಾರೆ.
ಈ ಚಿತ್ರದಲ್ಲಿ ನಟಿಸುವುದಕ್ಕೆ ಸಾಗರ್ ಕುಮಾರ್ ಹೇಳಿದ ಕಥೆ ಕಾರಣ ಎನ್ನುವ ನಟ ಕಿಶೋರ್, ‘ನಾನು ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ. ಅನಾಮಧೇಯ ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ ‘ಅನಾಮಧೇಯ ಅಶೋಕ್ ಕುಮಾಷರ್’ ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು’ ಎನ್ನುತ್ತಾರೆ.
ಈ ಚಿತ್ರಕ್ಕೆ ಅಜಾದ್ ಸಂಗೀತ, ಸುನೀಲ್ ಹೊನ್ನಳ್ಳಿ ಛಾಯಾಗ್ರಹಣವಿದ್ದು, ಕಾಂತರಾಜ್ ‘ಕಡ್ಡಿಪುಡಿ’, ಸುಧೀಂದ್ರನ್ ನಾಯರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ.ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.



(The Kannada Crime thriller Anamadheya Ashok Kumar, directed by Sagar Kumar, is set to release on February 7. Inspired by real-life crime incidents, the film unfolds over a gripping 12-hour murder investigation. Kishore Kumar portrays a journalist, while Harshil Koushik takes on the role of a police inspector.)