Anant Nag ; ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೇ ಸಿಕ್ಕಿತು ಅನಂತ್‍ ನಾಗ್‍ ಅವರಿಗೆ

Anant Nag gets Padma Bhushan

ಅನಂತ್ ನಾಗ್‍ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕೆಂದು ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದರು. ಈಗ ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೊಂದು ಅನಂತ್‍ ನಾಗ್‍ ಅವರಿಗೆ ಸಿಕ್ಕಿದೆ. ಶನಿವಾರ, ಪದ್ಮ ಪ್ರಶಸ್ತಿಗಳ ಘೋಷಣೆಯಾಗಿದ್ದು, ಅನಂತ್‍ ನಾಗ್‍ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಘೋಷಿಸಿದೆ.

ಕಡಿಮೆ ಅನುಭವ ಮತ್ತು ಕಡಿಮೆ ಚಿತ್ರಗಳನ್ನು ಮಾಡುವವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ, ಕನ್ನಡದಲ್ಲಿ ನಿಜವಾದ ಸಾಧಕರಿಗೂ ಪದ್ಮ ಪ್ರಶಸ್ತಿಗಳು ಬಾರದಿರುವುದಕ್ಕೆ ಸಣ್ಣ ಬೇಸರವಿತ್ತು. ಅದರಲ್ಲೂ ಕನ್ನಡದಲ್ಲಿ ಅನಂತ್ ನಾಗ್‍, ದ್ವಾರಕೀಶ್‍, ರವಿಚಂದ್ರನ್, ಹಂಸಲೇಖ ಸೇರಿದಂತೆ ಸಾಕಷ್ಟು ಅರ್ಹರು ಇದ್ದರು. ಅವರ್ಯಾರಿಗೂ ಪ್ರಶಸ್ತಿ ಬಂದಿರಲೇ ಇಲ್ಲ.

ಈ ವಿಷಯವಾಗಿ ಪ್ರತೀ ವರ್ಷ ಪ್ರಶಸ್ತಿ ಘೋಷಣೆಯಾದಾಗಲೂ ಚರ್ಚೆ ನಡೆಯುತ್ತಲೇ ಇತ್ತು. ಶನಿವಾರ ರಾತ್ರಿ ಅನಂತ್ ನಾಗ್‍ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಪಡೆಯುತ್ತಿರುವ ಕನ್ನಡದ ಮೂರನೆಯ ನಟರಾಗಿದ್ದಾರೆ. ಇದಕ್ಕೂ ಮೊದಲು ಡಾ. ರಾಜಕುಮಾರ್ ಮತ್ತು ಬಿ. ಸರೋಜದೇವಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.

ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸಿರುವ ಅನಂತ್ ನಾಗ್‍, ‘ನಾನು ಎಂದೂ ಪ್ರಶಸ್ತಿ ಬಯಸಿದವನಲ್ಲ. ಆದರೆ, ನನಗೆ ಪ್ರಶಸ್ತಿ ಬರಬೇಕು ಎಂದು ಕನ್ನಡಿಗರು ಹೇಳುತ್ತಲೇ ಇದ್ದರು. ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಪದ್ಮ ಪ್ರಶಸ್ತಿಯ ಪಡೆಯುವವರ ಹೆಸರನ್ನು ಸಾರ್ವಜನಿಕರು ಸೂಚಿಸಲು ಅವಕಾಶ ನೀಡಿದ ನಂತರ, ಕನ್ನಡಿಗರು ನನ್ನ ಹೆಸರನ್ನು ಸೂಚಿಸುತ್ತಲೇ ಬಂದಿದ್ದರು. ಆದರೆ, ನನಗೆ ಪ್ರಶಸ್ತಿ ಬಂದಿರಲಿಲ್ಲ. ಇದರಿಂದ ಜನರಿಗೆ ಬೇಸರವಾಗಿತ್ತು. ಇದೀಗ ಪ್ರಶಸ್ತಿ ಬಂದಿದ್ದು, ಎಲ್ಲರೂ ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ನಾನು ಋಣಿ’ ಎಂದು ಹೇಳಿದ್ದಾರೆ.

(Anant Nag gets Padma Bhushan)

Leave a Reply

Your email address will not be published. Required fields are marked *