Chikkanna; ಕರೊನಾ ಸಮಯದಲ್ಲಿ ಹುಟ್ಟಿಕೊಂಡ ತಾಯಿ-ಮಗನ ಕಥೆ ‘ಲಕ್ಷ್ಮೀಪುತ್ರ’

ಕೆಲವು ದಿನಗಳ ಹಿಂದೆ ಚಿಕ್ಕಣ್ಣ ಅಭಿನಯದಲ್ಲಿ ‘ಲಕ್ಷ್ಮೀಪುತ್ರ’ ಎಂಬ ಚಿತ್ರವನ್ನು ಘೋಷಿಸಿದ್ದರು ಎ.ಪಿ. ಅರ್ಜುನ್. ಈಗ ಆ ಚಿತ್ರದ ಮುಹೂರ್ತ ಸದ್ದಿಲ್ಲದೆ ಬೆಂಗಳೂರಿನಲ್ಲಿ ನೆರವೇರಿದೆ. ನಾಗರಬಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಎ.ಪಿ. ಅರ್ಜುನ್ ಫಿಲಂಸ್ ಅಡಿಯಲ್ಲಿ ಈ ಚಿತ್ರವನ್ನು ಅರ್ಜುನ್ ಪತ್ನಿ ನಿರ್ಮಿಸಿದರೆ, ಅರ್ಜುನ್ ಚಿತ್ರಗಳಿಗೆ ಕೆಲಸ ಮಾಡಿದ್ದ ವಿಜಯ್ ಸ್ವಾಮಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಎ.ಪಿ. ಅರ್ಜುನ್ ಕಥೆ ಬರೆದಿದ್ದಾರಂತೆ. ‘ಲಕ್ಷ್ಮೀಪುತ್ರ’ ಚಿತ್ರವು ಕರೊನಾ ಸಮಯದಲ್ಲಿ ಹುಟ್ಟಿಕೊಂಡ ಕಥೆಯಂತೆ. ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ಎ.ಪಿ. ಅರ್ಜುನ್, ‘ಇದು ತಾಯಿ ಮಗನ ಕಥೆ. ಪ್ರತಿಯೊಬ್ಬರೂ ನೋಡಬೇಕಾದ ಒಂದು ಭಾವನಾತ್ಮಕ ಕಥೆ ಈ ಚಿತ್ರದಲ್ಲಿದೆ. ಭಾವನೆ, ಸಂಬಂಧ ಇಟ್ಕೊಂಡು ಈ ಕಥೆ ಹೆಣೆಯಲಾಗಿದೆ. ಒಮ್ಮೆ ಚಿಕ್ಕಣ್ಣ ಸಿಕ್ಕಾಗ ಹೇಳಿದ್ದೆ. ಹೀಗೆ ಶುರುವಾಗಿದ್ದು ‘ಲಕ್ಷ್ಮೀಪುತ್ರ’ ಎಂದರು.
ಚಿಕ್ಕಣ್ಣ ಮಾತನಾಡಿ, ‘ಕಳೆದ ವರ್ಷದ ಜನವರಿಯಲ್ಲಿ ‘ಉಪಾಧ್ಯಕ್ಷ’ ಬಿಡುಗಡೆಯಾಗಿತ್ತು. ಅದಾಗಿ ಒಂದು ವರ್ಷದ ನಂತರ ನಾನು ಒಂಟಿ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮೀಪುತ್ರ’ ಸೆಟ್ಟೇರಿದೆ. ಉಪಾಧ್ಯಕ್ಷ’ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಚಾರಕ್ಕೆ ಬೇರೆ ಬೇರೆ ಊರುಗಳಿಗೆ ಹೋದಾಗ, ದೊಡ್ಡ ಸಂಖ್ಯೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರು ಚಿತ್ರ ನೋಡಲು ಬಂದಿದ್ದರು. ನನ್ನ ನೋಡಲು ಫ್ಯಾಮಿಲಿ ಬರುತ್ತದೆ, ಹೀಗಾಗಿ ಮುಂದಿನ ಚಿತ್ರ ಒಳ್ಳೆಯ ಫ್ಯಾಮಿಲಿ ಕಥೆ ಮಾಡಬೇಕು ಎಂದಾಗ, ಆ ಹುಡುಕಾಟದಲ್ಲಿ ಸಿಕ್ಕಿದ್ದು ‘ಲಕ್ಷ್ಮೀಪುತ್ರ’. ಇಡೀ ಕುಟುಂಬ ನೋಡುವ ಸಿನಿಮಾ ಇದು. ಚಿತ್ರದಲ್ಲಿ ಒಂದು ಸಂದೇಶ ಸಹ ಇದೆ’ ಎಂದು ಹೇಳಿದರು.
‘ಲಕ್ಷ್ಮೀಪುತ್ರ’ ಚಿತ್ರದಲ್ಲಿ ತಾರಾ ಮತ್ತು ಚಿಕ್ಕಣ್ಣ ತಾಯಿ-ಮಗನಾಗಿ ನಟಿಸುತ್ತಿದ್ದಾರೆ. ಮಿಕ್ಕಂತೆ ಧರ್ಮಣ್ಣ ಕಡೂರು, ಕುರಿ ಪ್ರತಾಪ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಗಿರೀಶ್ ಆರ್. ಗೌಡ ಛಾಯಾಗ್ರಹಣವಿದೆ.