Kiccha Sudeep; ಅತ್ಯುತ್ತಮ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ ಸುದೀಪ್‍; ಅರ್ಹರಿಗೆ ಕೊಡಲು ಮನವಿ

Kiccha-Sudeep-Turns-Down-Karnataka-State-Film-Award

2019ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (Karnataka State Film Award) ಬುಧವಾರ ಘೋಷಣೆಯಾಗಿದೆ. ಪ್ರಶಸ್ತಿಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ತಮಗೆ ಸಿಕ್ಕ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುದೀಪ್‍ (Kichcha Sudeep) ತಿರಸ್ಕರಿಸಿದ್ದಾರೆ. ಈ ಪ್ರಶಸ್ತಿಯನ್ನು ಅರ್ಹರಿಗೆ ಕೊಡಿ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಪೈಲ್ವಾನ್‍’ ಚಿತ್ರದ ಅಭಿನಯಕ್ಕಾಗಿ ಸುದೀಪ್‍ ಅವರಿಗೆ ರಾಜ್ಯ ಸರ್ಕಾರವು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿತ್ತು. ಇದು ಅವರಿಗೆ ಸಿಗುತ್ತಿರುವ ಎರಡನೇ ಪ್ರಶಸ್ತಿ. ಈ ಹಿಂದೆ ‘ನಂದಿ’ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಸುದೀಪ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಈಗ ಎರಡನೆಯ ಬಾರಿಗೆ ಅವರಿಗೆ ಪ್ರಶಸ್ತಿ ಸಿಕ್ಕಿದ್ದು, ಈ ಪ್ರಶಸ್ತಿಯನ್ನು ಅವರು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ:- 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪೈಲ್ವಾನ್‌ ಸುದೀಪ ಅತ್ಯುತ್ತಮ ನಟ

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್‍, ‘ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ನಾನು ಕಳೆದ ಕೆಲವು ವರ್ಷಗಳಿಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಕ್ಕೆ ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಹಲವು ಅರ್ಹ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ಸಿಕ್ಕರೆ ನಾನು ಸಂತೋಷಪಡುತ್ತೇನೆ. ಯಾವುದೇ ಪ್ರಶಸ್ತಿಯ ಆಸೆ ಇಲ್ಲದೆ, ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಬದ್ಧನಾಗಿರುತ್ತೇನೆ. ಆಯ್ಕೆ ಸಮಿತಿ ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದು ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಸ್ಫೂರ್ತಿ ತುಂಬಿದೆ. ಆದರೆ, ಈ ಪ್ರಶಸ್ತಿಯನ್ನು ಒಪ್ಪದಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಈ ವಿಷಯವಾಗಿ ಸರ್ಕಾರ ಮತ್ತು ಆಯ್ಕೆ ಸಮಿತಿಯವರು ನನ್ನ ನಿರ್ಧಾರವನ್ನು ಗೌರವಿಸಿ, ಸಹಕರಿಸುತ್ತಾರೆ ಎಂದು ನಂಬಿದ್ದೇನೆ’ ಎಂದು ಸುದೀಪ್‍ ಹೇಳಿದ್ದಾರೆ.

ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸುದೀಪ್ ಅವರಿಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತಾದರೂ, ಈ ಗೌರವವನ್ನು ತಿರಸ್ಕರಿಸಿದ್ದ ಸುದೀಪ್, ತಮಗಿಂಥ ಅರ್ಹರಿಗೆ ನೀಡಲು ಸೂಚಿಸಿದ್ದರು.

(Kichcha Sudeep has declined Best Actor award says there are many deserving actors out there)

Leave a Reply

Your email address will not be published. Required fields are marked *