Puneeth Nivasa; ಇದು ಅಪ್ಪು ಅಭಿಮಾನಿಯ ಕಥೆ; ‘ಪುನೀತ್ ನಿವಾಸ‌’ಕ್ಕೆ ಚಾಲನೆ

Ashwini Puneeth Rajkumar, Puneeth Nivasa

ಪುನೀತ್‍ ರಾಆಜಕುಮಾರ್‍ (Puneeth Rajkumar) ಅವರ ಆದರ್ಶಗಳನ್ನು ನೆನಪಿಸುವ ಕೆಲವು ಚಿತ್ರಗಳು ಈಗಾಗಲೇ ನಿರ್ಮಾವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ಈ ತಂಡ ‘ಪುನೀತ್ ನಿವಾಸ’ (Puneeth Nivasa) ಎಂಬ ಚಿತ್ರವನ್ನು ಪ್ರಾರಂಭಿಸಿದ್ದು, ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರ‌ ಶುಭ ಹಾರೈಕೆಯೂ ಇದೆ.

ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ (Nagendra Prasad) ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ತ್ಯಾಗರಾಜ ನಗರದ ಗಂಗಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಗಂಗಮ್ಮ ತಾಯಿಯ ಮೇಲೆ ಪ್ರಥಮ‌ ದೃಶ್ಯವನ್ನು ಚಿತ್ರೀಕರಿಸಲಾಯಿತು.

ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಮಲ್ಲು ಎಂಬ ಹುಡುಗನ ಕಥೆಯಿದು. ತಾನೊಂದು ಸಿನಿಮಾ ಮಾಡಬೇಕೆಂದು ಕೂಡಿಟ್ಟುಕೊಂಡಿದ್ದ ಹಣದಿಂದ ಬಡ ಹುಡುಗಿಗೆ ಮನೆ ಕಟ್ಟಿಸಿಕೊಟ್ಟು, ಅದಕ್ಕೆ ‘ಪುನೀತ್ ನಿವಾಸ’ ಎಂದು ಹೆಸರಿಡುವ ಮೂಲಕ ಪುನೀತ್ ಅವರ ಆದರ್ಶಗಳನ್ನು ಪಾಲಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಪಂಚಮಿ ಸಿನಿ ಕ್ರಿಯೇಶನ್ಸ್ ಮೂಲಕ ಮೋಹನ್ ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾನು ಪುನೀತ್ ಅವರ ಜತೆ ಚಿತ್ರವೊಂದರಲ್‍ಲಿ ನಟಿಸಬೇಕಿತ್ತು. ಅವಕಾಶವೂ ಸಿಕ್ಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಮೋಹನ್ ಅವರು ಈ ಟೈಟಲ್ ಹೇಳಿದಾಗ ಮೈ ರೋಮಾಂಚನವಾಯಿತು. ಮರುಮಾತಾಡದೆ ಒಪ್ಪಿಕೊಂಡೆ’ ಎಂದು ಹೇಳಿದರು.

ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡಿ, ‘ಪುನೀತ್ ಅವರ ಅಭಿಮಾನಿಯೊಬ್ಬನ ಕಥೆಯಿದು. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ. ಕೃಪಾಕರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ’ ಎಂದರರು.

ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಜತೆಗೆ ಅಭಿಜಿತ್, ಎಂ.ಎಸ್.ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ಲಕ್ಷ್ಮಿ ಭಟ್, ರೇಖಾ ದಾಸ್, ಗಣೇಶ್ ರಾವ್ ಕೇಸರಕರ್, ಶಂಕರ್‍ ಭಟ್, ನಾಗೇಂದ್ರ ಪ್ರಸಾದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಬಾಲು ಅವರ ಛಾಯಾಗ್ರಹಣ, ಜೆಮ್ ಶಿವು ಸಂಭಾಷಣೆ, ಮುತ್ತುರಾಜ್ ಅವರ ಸಂಕಲನವಿದೆ.

Leave a Reply

Your email address will not be published. Required fields are marked *