Darshan Thoogudeepa; ಸಹೋದರನ ‘ರಾಯಲ್’ ನೋಡಿ ಕಣ್ಣೀರು ಹಾಕಿದ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪದಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಇರುವ ದರ್ಶನ್ (Darshan Thoogudeepa), ಸಿನಿಮಾದಿಂದ ದೂರವೇ ಇದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ತಮ್ಮ ಸಹೋದರ ದಿನಕರ್ ತೂಗುದೀಪ (Dinakar Thoogudeepa) ನಿರ್ದೇಶನದ ‘ರಾಯಲ್’ (Royal) ಚಿತ್ರವನ್ನು ಇತ್ತೀಚೆಗೆ ಕುಟುಂಬದವರ ಜೊತೆಗೆ ನೋಡಿದ್ದು, ಕಣ್ಣೀರು ಹಾಕಿದ್ದಾರೆ.
ದರ್ಶನ್ ಸಹೋದರ ದಿನಕರ್ ನಿರ್ದೇಶನದ ‘ರಾಯಲ್’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಕುಟುಂಬದವರಿಗಾಗಿಯೇ ದಿನಕರ್ ವಿಶೇಷ ಪ್ರದರ್ಶನವೊಂದನ್ನು ಇತ್ತೀಚೆಗೆ ಆಯೋಜಿಸಿದ್ದರು. ಈ ಪ್ರದರ್ಶನದಲ್ಲಿ ಅವರ ಅಕ್ಕ, ತಾಯಿ ಮೀನಾ ತೂಗುದೀಪ, ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ ಸೇರಿದಂತೆ ಹಲವರು ಹಾಜರಿದ್ದು ಚಿತ್ರವನ್ನು ನೋಡಿದರು.
ಈ ಪ್ರದರ್ಶನಕ್ಕೆ ತಾಯಿ ಮೀನಾ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆಗೆ ಬಂದ ದರ್ಶನ್, ತಾಯಿಯ ಪಕ್ಕ ಕೂತು ಚಿತ್ರವನ್ನು ವೀಕ್ಷಿಸಿದರು. ಎಮೋಷನಲ್ ದೃಶ್ಯಗಳಲ್ಲಿ ದರ್ಶನ್ ಕಣ್ಣೀರು ಹಾಕಿದ್ದು, ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.
‘ರಾಯಲ್’ ಚಿತ್ರವನ್ನು ಜಯಣ್ಣ ಫಿಲಂಸ್ ಬ್ಯಾನರ್‍ನನಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶದ ‘ಕಿಸ್’ ಮೂಲಕ ಚಿತ್ರರಂಗಕ್ಕೆ ಬಂದ ವಿರಾಟ್ (Viraat) ನಟನೆಯ ಎರಡನೇ ಚಿತ್ರ ಇದೀಗ ಬಿಡುಗಡೆಯಾಗುತ್ತಿದೆ. ಸಂಜನಾ ಆನಂದ್ (Sanjana Anand) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂಕೇತ್ ಅವರ ಛಾಯಾಗ್ರಹಣವಿದೆ.
ದಿನಕರ್ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗದೆ ಸುಮಾರು ಆರು ವರ್ಷಗಳೇ ಕಳೆದಿವೆ. 2018ರಲ್ಲಿ ದಿನಕರ್ ತೂಗುದೀಪ ನಿರ್ದೇಶನದ ‘ಲೈಫ್ ಜೊತೆಗೆ ಒಂದ್ ಸೆಲ್ಫಿ’ ಚಿತ್ರ ಬಿಡುಗಡೆಯಾಗಿತ್ತು. ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಪ್ರೇಮ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ವಿರಾಟ್ ಅಭಿನಯದ ‘ರಾಯಲ್’ ಚಿತ್ರದ ಮೂಲಕ ದಿನಕರ್ ವಾಪಸ್ಸಾಗಿದ್ದಾರೆ.
ಮುಂದಿನ ದಿನಗಳಲ್ಲಿ ದರ್ಶನ್ ಅಭಿನಯದ ಚಿತ್ರವನ್ನೂ ದಿನಕರ್ ನಿರ್ದೇಶಿಸುವ ಸಾಧ್ಯತೆ ಇದೆ.

(Darshan Thoogudeepa shown great support for his brother, Dinakar Thoogudeepa and his directorial venture Royal. young actors Viraat and Sanjana Anand in the lead roles. The film directed by Dinakar. Darshan recently attended a special screening of Royal, accompanied by his wife and mother. During the screening, the actor displayed a rare emotional side, wiping away tears as he sat beside his mother.)