2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪೈಲ್ವಾನ್ ಸುದೀಪ ಅತ್ಯುತ್ತಮ ನಟ

ಬೆಂಗಳೂರು : 2019ರ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ (Karnataka State Film Awards 2019)ಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್ಗೆ (Kiccha Sudeep) ಅತ್ಯತ್ತಮ ನಟ ಹಾಗೂ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ (Anupama Gowda) ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪಿ.ಶೇಷಾದ್ರಿ (P Sheshadri) ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವಿಭಾಗದ ಪ್ರಶಸ್ತಿಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 1ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನ ಪದಕ ನೀಡಲಾಗುತ್ತದೆ.
‘ಲವ್ ಮಾಕ್ ಟೈಲ್’ ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ವಿಭಾಗದ ಪ್ರಶಸ್ತಿಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 75 ಸಾವಿರ ರೂ. ನಗದು ಹಾಗೇ 100 ಗ್ರಾಂ ಬೆಳ್ಳಿ ಪದಕ ನೀಡಲಾಗುತ್ತದೆ. ಮೂರನೇಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಅಘ್ರ್ಯಂ’ ಚಿತ್ರ ಆಯ್ಕೆಯಾಗಿದೆ. 50ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕೊಡಲಾಗುತ್ತದೆ.
‘ಕನ್ನೇರಿ’ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 75 ಸಾವಿರ ರೂ. ನಗದು, 100 ಗ್ರಾಂ ಬೆಳ್ಳಿ ಪದಕ ಕೊಡಲಾಗುತ್ತದೆ. ‘ಇಂಡಿಯಾ ವರ್ಸ್ಸ್ ಇಂಗ್ಲೆಂಡ್’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.
‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಚಿತ್ರ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುತ್ತದೆ. ‘ಗೋಪಾಲಗಾಂಧಿ’ ಚಿತ್ರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದ್ದು, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 50 ಸಾವಿರ ರೂ. ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ಕೊಡಲಾಗುತ್ತದೆ.
ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯತ್ತಮ ನಟ ವಿಭಾಗದಲ್ಲಿ ನೀಡುವ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಗೆ ʻತ್ರಯಂಬಕಂʼ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಕೆ.ಎಸ್.ಅಶ್ವಥ್ ಅವರ ಹೆಸರಿನಲ್ಲಿ ಕೊಡಲಾಗುವ ಪೋಷಕ ನಟ ಪ್ರಶಸ್ತಿಗೆ ಕೆಮಿಸ್ಟ್ರಿ ಆಪ್ ಕರಿಯಪ್ಪ ಚಿತ್ರದ ನಟನೆಗಾಗಿ ತಬಲ ನಾಣಿ, ಪೋಷಕ ನಟಿ ಪ್ರಶಸ್ತಿಗೆ ಬ್ರಾಹ್ಮಿ ಚಿತ್ರದ ಅನೂಷಾ ಕೃಷ್ಣ ಅವರನ್ನು ಆಯ್ಕೆ ಆಗಿದ್ದಾರೆ. ಅತ್ಯುತ್ತಮ ಕತೆ ಪ್ರಶಸ್ತಿಗೆ ಜಯಂತ್ ಕಾಯ್ಕಿಣಿ ಅವರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರ ಆಯ್ಕೆಯಾಗಿದೆ.
ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ನೀಡುವ ಪ್ರಶಸ್ತಿಗೆ ಲವ್ ಮಾಕ್ ಟೈಲ್‍ನ ಡಾರ್ಲಿಂಗ್ ಕೃಷ್ಣ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಸಂಭಾಷಣೆಗಾಗಿ ನೀಡುವ ಪ್ರಶಸ್ತಿಗೆ ಅಮೃತಮತಿ ಚಿತ್ರದ ಬರುಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಯಜಮಾನ ಚಿತ್ರಕ್ಕಾಗಿ ವಿ.ಹರಿಕೃಷ್ಣ ಅವರಿಗೆ ನೀಡಲಾಗಿದೆ. ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಝಾನ್ಸಿ ಐಪಿಎಸ್ ಚಿತ್ರದ ಎಡಿಟರ್ ಜಿ. ಬಸವರಾಜ್ ಅರಸ್, ಅತ್ಯುತ್ತಮ ಬಾಲ ನಟ ಪ್ರಶಸ್ತಿಗೆ ಮಿಂಚುಹುಳ ಚಿತ್ರ ಮಾಸ್ಟರ್ ಪ್ರೀತಂ, ಬಾಲ ನಟಿ ಪ್ರಶಸ್ತಿಗೆ ಸುಗಂಧಿ ಚಿತ್ರದ ಬೇಬಿ ವೈಷ್ಣವಿ ಅಡಿಗ, ಕಲಾ ನಿರ್ದೇಶನ ಪ್ರಶಸ್ತಿಗೆ ಮೋಹನದಾಸ್ ಚಿತ್ರದ ಹೊಸ್ಮನೆ ಮೂರ್ತಿ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಗೀತ ರಚನೆಗಾಗಿ ಪೆನ್ಸಿಲ್ ಬಾಕ್ಸ್ ಚಿತ್ರದ ರಝಾಕ್ ಪುತ್ತೂರು, ಹಿನ್ನೆಲೆ ಗಾಯಕ ಪ್ರಶಸ್ತಿಗೆ ಲವ್ ಮಾಕ್ ಟೈಲ್‍ನ ರಘು ದೀಕ್ಷಿತ್, ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ರಾಗಭೈರವಿ ಚಿತ್ರದ ಡಾ. ಜಯದೇವಿ ಜಿಂಗಮ ಶೆಟ್ಟಿ, ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಗೆ ಮಕ್ಕಡ್ ಮನಸ್ ಚಿತ್ರದ ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ.
ತೀರ್ಪುಗಾರರ ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಅಮೃತಮತಿ ಹಾಗೂ ತಮಟೆ ನರಸಿಂಹಯ್ಯ ಚಿತ್ರಗಳು ಆಯ್ಕೆಯಾಗಿದ್ದು, ಚಿತ್ರ ನಿರ್ಮಾಪಕರು ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ. ಅತ್ಯುತ್ತಮ ಚಿತ್ರ ನಟ ಪ್ರಶಸ್ತಿ ಸಹಿತ ಉಳಿದ ಎಲ್ಲ ಪ್ರಶಸ್ತಿಗಳು ಇಪ್ಪತ್ತು ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ.
2019ನೆ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಟ್ಟು 180 ಚಲನಚಿತ್ರಗಳು ಅರ್ಜಿ ಸಲ್ಲಿಸಿದ್ದವು. ಆ ಪೈಕಿ 8 ಚಲನಚಿತ್ರ ಹೊತುಪಡಿಸಿ, 172 ಚಲನಚಿತ್ರಗಳನ್ನು ಮಾತ್ರ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಸಮಿತಿ ವರದಿ ನೀಡಿದ್ದು, ಅದರಂತೆ ಸರಕಾರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅತ್ಯುತ್ತಮ ಕರ್ನಾಟಕ ಪ್ರದೇಶಿಕ ಭಾಷಾ ಚಿತ್ರ ವಿಭಾಗದಲ್ಲಿ ಬ್ಯಾರಿ ಭಾಷೆಯ ‘ಟ್ರಿಬಲ್ ತಲಾಕ್’ ಚಿತ್ರವು ಆಯ್ಕೆಯಾಗಿದೆ.
2019 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಕೆಳಕಂಡಂತಿದೆ:-
ಅತ್ಯುತ್ತಮ ಅತ್ಯುತ್ತಮ ಚಿತ್ರ: ಮೋಹನ ದಾಸ
ದ್ವಿತೀಯ ಅತ್ಯುತ್ತಮ ಚಿತ್ರ: ಲವ್ ಮಾಕ್ಟೈಲ್
ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್
ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲ ಗಾಂಧಿ (ನಾಗೇಶ್ ಎನ್)
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತಲಾಕ್ ತಲಾಕ್ ತಲಾಕ್ (ಬ್ಯಾರಿ ಭಾಷೆ)
ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕಾರ್ಯಪ್ಪ)
ಅತ್ಯುತ್ತಮ ಪೋಷಕ ನಟಿ: ಕುಮಾರಿ ಅನೂಷಾ ಕೃಷ್ಣ (ಬ್ರಾಹ್ಮಿ)
ಅತ್ಯುತ್ತಮ ಕಥೆ: ಜಯಂತ್ ಕಾಯ್ಕಿಣಿ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)
ಅತ್ಯುತ್ತಮ ಚಿತ್ರಕಥೆ: ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್)
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ)
ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್. ಭಾಸ್ಕರ್ (ಮೋಹನದಾಸ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿ ಹರಿಕೃಷ್ಣ (ಯಜಮಾನ)
ಅತ್ಯುತ್ತಮ ಸಂಕಲನ: ಜಿ. ಬಸವರಾಜ್ ಅರಸ್ (ಝಾನ್ಸಿ IPS)
ಅತ್ಯುತ್ತಮ ಬಾಲನಟ: ಮಾಸ್ಟರ್ ಪ್ರೀತಂ (ಮಿಂಚುಹುಳು)
ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)
ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನ ದಾಸ)
ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು (ಪೆನ್ಸಿಲ್ ಬಾಕ್ಸ್)
ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ (ಲವ್ ಮಾಕ್ಟೇಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಂಗಮ ಶೆಟ್ಟಿ (ರಾಗಭೈರವಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಮತ್ತು ತಮಟೆ ನಟಸಿಂಹಯ್ಯ


(The Karnataka State Film Awards 2019, announced on January 22, celebrated outstanding talent in Kannada cinema. Kiccha Sudeep won the award for his performance in the sports drama Pailwan, Anupama clinched the honour for her role in the thriller Trayambakam. P Sheshadri Mohanadas claimed First Best Film, Darling Krishna’s Love Mocktail secured Best Screenplay, V. Harikrishna (Yajamana) for music and India Vs England as Most Popular Film.)
One thought on “2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪೈಲ್ವಾನ್ ಸುದೀಪ ಅತ್ಯುತ್ತಮ ನಟ”