Tharun Sudhir: ಮತ್ತೆ ಬಂದ ರಾಣ; ತರುಣ್ ಸುಧೀರ್ ನಿರ್ಮಾಣದ ಚಿತ್ರಕ್ಕೆ ನಾಯಕ

‘ಏಕ್ ಲವ್ ಯಾ’ ಚಿತ್ರದಲ್ಲಿ ನಾಯಕನಾಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣ, ಆ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ವಿಜಯ್ ಈಶ್ವರ್ ನಿರ್ದೇಶನದ ಚಿತ್ರವೊಂದರಲ್ಲಿ ಅವರು ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಚಿತ್ರ ಇದುವರೆಗೂ ಶುರುವಾಗಿಲ್ಲ. ಹೀಗಿರುವಾಗಲೇ, ರಾಣ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ.
ಈ ಬಾರಿ ರಾಣ, ತರುಣ್ ಸುಧೀರ್ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಕಾಟೇರ’ ಚಿತ್ರದ ನಂತರ ತರುಣ್ ಸುಧೀರ್, ಆಟ್ಲಾಂಟ ನಾಗೇಂದ್ರ ಅವರೊಂದಿಗೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಘೋಷಣೆ ಕಳೆದ ವರ್ಷವಾಗಿತ್ತು. ಈ ಚಿತ್ರವು ಘೋಷಣೆಯಾಗಿತ್ತಾದರೂ, ಚಿತ್ರದ ನಾಯಕ-ನಾಯಕಿ ಯಾರೆಂಬ ವಿಷಯವನ್ನು ತರುಣ್ ಬಹಿರಂಗಪಡಿಸಿರಲಿಲ್ಲ. ಇದೀಗ ಈ ವಿಷಯ ಕೊನೆಗೂ ಬಹಿರಂಗವಾಗಿದ್ದು, ಚಿತ್ರದಲ್ಲಿ ರಾಣ ನಾಯಕನಾಗಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ರಾಣ ಪಾತ್ರವೇನು? ಅವರ ಹೆಸರೇನಾಗಿರುತ್ತದೆ? ಮುಂತಾದ ಯಾವುದೇ ವಿಷಯವನ್ನು ಚಿತ್ರತಂಡ ಬಿಟ್ಟುಕೊಕಟ್ಟಿಲ್ಲ. ರಕ್ತಸಿಕ್ತವಾದ ಮತ್ತು ಒಂದು ಕಡೆ ಬೆಂಕಿ ಹೊತ್ತಿಕೊಂಡಿರುವ ಡ್ರೈವಿಂಗ್ ಲೈಸನ್ಸ್ ಇರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇನ್ನು, ವಿಳಾಸದಲ್ಲಿ ಚಾಮರಾಜನಗರದ ವಿಳಾಸ ನೀಡಲಾಗಿದೆ. ಚಾಮರಾಜನಗರದ ಯುವಕನೊಬ್ಬನ ಕಥೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬ ವಿಷಯ ಈ ಪೋಸ್ಟರ್ ನೋಡಿದಾಗ ಸ್ಪಷ್ಟವಾಗುತ್ತದೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಈ ಹಿಂದೆ ‘ಕಾಟೇರ’ ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಹೊಸ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್ಲೈನ್ ನೀಡಲಾಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಸಂಕಲನವಿದೆ.