‘ದಿಲ್ದಾರ’ನ ಜೊತೆಯಾದ ಕೀರ್ತಿ ಕೃಷ್ಣ; ಶರಣ್ ಕುಟುಂಬದ ಇನ್ನೊಂದು ಪ್ರತಿಭೆ

ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯಾ’ ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ‘ದಿಲ್ದಾರ್’ ಎಂಬ ಇನ್ನೊಂದು ಚಿತ್ರದಲ್ಲೂ ಶ್ರೇಯಸ್ ನಟಿಸುತ್ತಿದ್ದು, ಈ ಚಿತ್ರಕ್ಕೆ ಅವರಿಗೆ ನಾಯಕಿಯಾಗಿ ಕೀರ್ತಿ ಕೃಷ್ಣ ಆಯ್ಕೆಯಾಗಿದ್ದಾರೆ.
ಈ ಕೀರ್ತಿ ಕೃಷ್ಣ ಯಾರು ಎಂಬ ಪ್ರಶ್ನೆ ಸಹಜ. ಕೀರ್ತಿ, ಶರಣ್ ಮತ್ತು ಶ್ರುತಿ ಅವರ ಸಂಬಂಧಿ. ಅವರಿಬ್ಬರ ಸಹೋದರಿ ಉಷಾ ಕೃಷ್ಣ ಅವರ ಮಗಳು ಈ ಕೀರ್ತಿ ಕೃಷ್ಣ. ‘ಸಿಂಪಲ್’ ಸುನಿ ಮುಂಬರುವ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ, ಈಗಾಗಲೇ ‘ದಿಲ್ದಾರ್’ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

‘ದಿಲ್ದಾರ್’ ಚಿತ್ರವನ್ನು ಮಧು ಗೌಡ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರ. ಇದಕ್ಕೂ ಮೊದಲು ಕೆಲವು ಚಿತ್ರಗಳಿಗೆ ಕೆಲಸ ಮಾಡುತ್ತಿರುವ ಮಧು ಗೌಡ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದು ಯಾವುದೇ ಸಿದ್ಧಸೂತ್ರಗಳಿಲ್ಲದ ವಿಭಿನ್ನ ಪ್ರೇಮಕಥೆಯಂತೆ.
ಈಗಾಗಲೇ ‘ದಿಲ್ದಾರ್’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಒಂದು ಹಾಡನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಈ ಹಾಡನ್ನು ವಿಶೇಷವಾಗಿ ಸೆರೆ ಹಿಡಿಯಲು ನಿರ್ದೇಶಕರು ತಯಾರಾಗಿದ್ದಾರೆ. ಈಗಾಗಲೇ ಅರ್ಜುನ್ ಜನ್ಯ ಹಾಡೊಂದನ್ನು ಸಂಯೋಜಿಸಿದ್ದು, ಅದಕ್ಕೆ ತಕ್ಕುಗಾದ ನೃತ್ಯ ಸಂಯೋನೆಯೂ ನಡೆದಿದೆ. ನಾಯಕ ನಟ ಶ್ರೇಯಸ್ ಇದಕ್ಕಾಗಿ ಶ್ರಮಪಟ್ಟು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರತಂಡ ಆ ಹಾಡಿಗಾಗಿ ತಾಲೀಮು ನಡೆಸುತ್ತಿದ್ದು, ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ.
ಅಂದುಕೊಂಡಂತೆಯೇ ಎಲ್ಲ ನಡೆದರೆ ಇದೇ ಯುಗಾದಿಯ ಆಸುಪಾಸಲ್ಲಿ ‘ದಿಲ್ದಾರ್’ ಚಿತ್ರ ತೆರೆಗಾಣಲಿದೆ. ಚಿತ್ರದಲ್ಲಿ ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡಿದ್ದು, ಮಿಕ್ಕಂತೆ. ‘ಕೆಜಿಎಫ್’ ಖ್ಯಾತಿಯ ‘ಆಂಡ್ರ್ಯೂ’ ಅವಿನಾಶ್, ‘ಭಜರಂಗಿ’ ಲೋಕಿ, ಅರ್ಪಿತ್ ಖಳ ನಟರಾಗಿ ನಟಿಸಿದ್ದಾರೆ.
