Nimagondu Sihi Suddi; ಅರ್ಜುನ ಗರ್ಭಧಾರಣೆ ಮಾಡಿದಾಗ; ಮಹಾಶಿವರಾತ್ರಿಗೆ ‘ನಿಮಗೊಂದು ಸಿಹಿ ಸುದ್ದಿ’

ಯುವಕನೊಬ್ಬ ಗರ್ಭದಾರಣೆ ಮಾಡಿದಾಗ ಏನಾಗುತ್ತದೆ? ಇಂಥದ್ದೊಂದು ವಿಷಯವನ್ನಿಟ್ಟುಕೊಂಡು ರವಿ ಭಟ್ ಸದ್ದಿಲ್ಲದೆ ಚಿತ್ರವೊಂದನ್ನು ಮಾಡಿದ್ದಾರೆ. ಚಿತ್ರಕ್ಕೆ ‘ನಿಮಗೊಂದು ಸಿಹಿ ಸುದ್ದಿ’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ಶೀರ್ಷಿಕೆಯನ್ನು ಘೋಷಿಸುವ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ರವಿ ಭಟ್ ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅವರ ‘ನಿಮಗೊಂದು ಸಿಹಿಸುದ್ದಿ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅವ್ಯಕ್ತ ಸಿನಿಮಾಸ್ ಸಂಸ್ಥೆಯ ಹರೀಶ್ ಎನ್. ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ರಘು ಭಟ್, ‘ಮಹಾಭಾರತದಲ್ಲಿ ಅರ್ಜುನ ಅದೆಷ್ಟು ಪರಾಕ್ರಮಿಯಾಗಿದ್ದರೂ, ಒಂದು ವರ್ಷ ಕಾಲ ಹೆಣ್ಣಾಗಿರಬೇಕಾಯಿತು. ಈ ತರಹದ ಹಲವು ಕಥೆಗಳು ನಮ್ಮ ಇತಿಹಾಸದ ಪುಟಗಳಲ್ಲಿ ಸಿಗುತ್ತದೆ. ಈ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಕಥೆ ಮಾಡಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಮಾಡಿ ಕಥೆ ಬರೆದಿದ್ದೇನೆ. ಪುರುಷರಿಂದ ಗರ್ಭಧಾರಣೆ ಸಾಧ್ಯವಾ? ಎಂಬ ವಿಷಯವನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿಯ ಚಿತ್ರ ಎನ್ನುವ ಅವರು, ‘ಈ ಚಿತ್ರದಲ್ಲಿ ಸಾಕಷ್ಟು ಸೆಂಟಿಮೆಂಟ್ ಇದೆ. ಸಂಬಂಧಗಳ ಕುರಿತು ಹಲವು ವಿಷಯಗಳಿವೆ. ಜೊತೆಗೊಂದು ಸಂದೇಶ ಸಹ ಇದೆ. ಇಲ್ಲಿ ನಾಯಕನ ಹೆಸರು ಅರ್ಜುನ್. ಅವನು ಯಾಕೆ ಮತ್ತು ಹೇಗೆ ಗರ್ಭಧಾರಣೆ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಸದ್ಯಕ್ಕೆ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಟೀಸರ್, ಟ್ರೇಲರ್ ಬಿಡುಗಡೆಯಾಗಲಿದೆ. ಫೆಬ್ರವರಿ ಕೊನೆಯಲ್ಲಿ ಶಿವರಾತ್ರಿಯ ಹೊತ್ತಿಗೆ ಬಿಡುಗಡೆಯಾಗಲಿದೆ’ ಎಂದರು.
‘ನಿಮಗೊಂದು ಸಿಹಿ ಸುದ್ದಿ’ ಚಿತ್ರದಲ್ಲಿ ರಘು ಜೊತೆಗೆ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತವಿದೆ.