ಸ್ವಾತಂತ್ರ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ ‘45’!

Shivaraj-kumar-Upendra-raj-b-shetty-45-movie

ಶಿವರಾಜಕುಮಾರ್‍, ಉಪೇಂದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರವು ಬೇಗ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಚಿತ್ರವು ಇನ್ನೂ ಏಳು ತಿಂಗಳುಗಳ ನಂತರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

‘45’ ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ VFX ಕೆಲಸಗಳು ನಡೆಯುತ್ತಿವೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್‍ ಸಹ ಬಿಡುಗಡೆಯಾಗಿದೆ.

‘45’ ಚಿತ್ರದ ಕುರಿತು ಮಾತನಾಡುವ ಅರ್ಜುನ್‍ ಜನ್ಯ, ‘ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಡಬ್ಬಿಂಗ್ ಸೇರಿದಂತೆ ಎಲ್ಲಾ ಕೆಲಸ ಮುಗಿದಿದೆ. ಚಿತ್ರದಲ್ಲಿ VFX ಕೆಲಸ ತುಂಬಾ ಇದೆ. ಕೆನಡಾದ ಹೆಸರಾಂತ MARZ ಸಂಸ್ಥೆ VFX ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಗ್ರಾಫಿಕ್ ಕೆಲಸ ಮುಗಿಯಲಿದೆ. ಆನಂತರ ಎರಡು ತಿಂಗಳು ಸಮಯ ಚಿತ್ರದ ಪ್ರಚಾರ ಮಾಡಿ, ಆಗಸ್ಟ್ 15ರಂದು ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದೇವೆ. ಮೊದಲ ನಿರ್ದೇಶನದಲ್ಲೇ ಮಲ್ಟಿಸ್ಟಾರರ್ ಸಿನಿಮಾ ಮಾಡಿದ್ದೇನೆ ಎಂದು ಈಗಲೂ ನಂಬಲಾಗುತ್ತಿಲ್ಲ‌. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅವರಂತಹ ಮಹಾನ್ ಕಲಾವಿದರು ನನ್ನ ಚಿತ್ರದಲ್ಲಿ ನಟಿಸಿದ್ದಾರೆ ಎಂದರೆ ಈಗಲೂ ಆಶ್ಚರ್ಯವಾಗುತ್ತಿದೆ. ಚಿತ್ರ ಚೆನ್ನಾಗಿ ಮೂಡಿಬರಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರವೇ ಕಾರಣ’ ಎಂದರು.

ನಿರ್ದೇಶಕ ಅರ್ಜುನ್ ಜನ್ಯ ಸಿನಿಮಾ ಮಾಡಿದ ಪರಿ ಮೆಚ್ಚುವಂತದ್ದು ಎಂದ ಉಪೇಂದರ, ‘ಈ ಸಮಾರಂಭ ನೋಡಿದರೆ ಚಿತ್ರದ ದಿನಾಂಕ ಪ್ರಕಟಣೆ ಮಾಡುವ ಸಮಾರಂಭದ ಹಾಗಿಲ್ಲ. ಬದಲಾಗಿ ಚಿತ್ರದ ಸಂತೋಷಕೂಟದಂತಿದೆ. ಶಿವಣ್ಣ ಅವರಿಗೆ ಎದುರು ನೋಡುತ್ತಿದ್ದೇವೆ. ಬೇಗ ಬನ್ನಿ’ ಎಂದರು ನಟ ಉಪೇಂದ್ರ.

ರಾಜ್ ಬಿ ಶೆಟ್ಟಿ ಒಬ್ಬ ಕನ್ನಡಿಗನಾಗಿ, ಕನ್ನಡ ಸಿನಿಮಾ ಪ್ರೇಕ್ಷಕನಾಗಿ ‘45’ ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರಂತೆ. ‘ಉತ್ತಮ ತಂತಜ್ಞರ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ. ಈ ಚಿತ್ರದಲ್ಲಿ ಕೆಲಸ ಮಾಡಲ್ಲ ಎಂದು ಅರ್ಜುನ್ ಜನ್ಯ ಅವರ ಬಳಿ ಹೇಳಿದ್ದೆ. ಏಕೆಂದರೆ, ನಾನು ಚಿತ್ರ ನಿರ್ದೇಶನ ಮಾಡಬೇಕಾಗಿದೆ. ಅದರಿಂದ ಈ ಚಿತ್ರಕ್ಕೆ ತಡೆ ಆಗಬಾರದು ಎನ್ನುವದಷ್ಟೇ ನನ್ನ ಉದ್ದೇಶವಾಗಿತ್ತು. ‘45’ ಚಿತ್ರ ಮೂಡಿ ಬಂದಿರುವ ಪರಿ ಆದ್ಭುತ. ಚಿಕ್ಕ ಕಲಾವಿದನಿಗೂ ಕೂಡ ಹೆಚ್ಚಿನ ಅವಕಾಶ ನೀಡಿದ ಶಿವಣ್ಣ ಮತ್ತು ಉಪೇಂದ್ರ ಅವರ ಅಭಿಮಾನಿಯಾಗಿ ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಹೇಳಿದರು. ಈ ಚಿತ್ರಕ್ಕೆ ಅರ್ಜುನ್‍ ಜನ್ಯ, ಸತ್ಯ ಹೆಗಡೆ ಛಾಯಾಗ್ರಹಣವಿದೆ.

(Music director Arjun Janya makes his directorial debut with ’45 the movie. a star-studded action drama featuring Shivarajkumar, Upendra and Raj B. Shetty. Slated for release on August 15, 2025, the visually stunning film incorporates cutting-edge VFX by Toronto-based MARZ studio.)

Leave a Reply

Your email address will not be published. Required fields are marked *