ಜ.31ಕ್ಕೆ ಬರಲಿದ್ದಾರೆ ‘#ಪಾರುಪಾರ್ವತಿ’; ಎಂಟು ರಾಜ್ಯಗಳಲ್ಲಿ ಚಿತ್ರೀಕರಣ

Paru Parvathy Deepika Das

ದೀಪಿಕಾ ದಾಸ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಕೆಲವು ವರ್ಷಗಳೇ ಆಗಿದ್ದವು. ‘ಬಿಗ್‍ ಬಾಸ್‍’ಗೆ ಹೋಗಿ ಬಂದ ಮೇಲೆ, ದೀಪಿಕಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಡೆಯಾಗಿರಲಿಲ್ಲ. ಇದೀಗ ಅವರು ‘#ಪಾರುಪಾರ್ವತಿ’ ಎಂಬ ಚಿತ್ರವೊಂದಲ್ಲಿ ನಟಿಸಿದ್ದು, ಈ ಚಿತ್ರವು ಜನವರಿ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘#ಪಾರುಪಾರ್ವತಿ’ ಚಿತ್ರದಲ್ಲಿ ಇಸುಜು ಕಾರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಬಹುತೇಕ ಕಥೆ ಅದರಲ್ಲಿ ನಡೆಯಲಿದೆಯಂತೆ. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಉತ್ತರಾಖಾಂಡದಲ್ಲಿ ಮುಗಿಯಲಿದೆ. ಈ ಕಾರಿನಲ್ಲಿ ಒಂದು ಲಕ್ಷ ಕಿಲೋಮೀಟ್‍ ಸುತ್ತಲಾಗಿದೆ. ಎಂಟು ರಾಜ್ಯಗಳಲ್ಲಿ ಚಿತ್ರೀಕಣ ಮಾಡಲಾಗಿದೆ.

ಈ ಕಾರನ್ನು ಇದೀಗ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಈ ಕಾರನ್ನು ಶ್ರೀಕಾಂತ್‍ ಎಂಬ ವ್ಲಾಗರ್‍ ರಾಜ್ಯದ ಮೂಲೆಮೂಲೆಗೆ ತೆಗೆದುಕೊಂಡು ಹೋಗಿ ಪ್ರಚಾರ ಮಾಡಲಿದ್ದಾರೆ. ಅದಕ್ಕೂ ಮೊದಲು ಈ ಪ್ರಚಾರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ‘#ಪಾರುಪಾರ್ವತಿ’ ಚಿತ್ರದ ನಿರ್ದೇಶಕ ರೋಹಿತ್ ಕೀರ್ತಿ, ‘ನಮ್ಮ‌ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ.‌ ದೀಪಿಕಾ ದಾಸ್, ಪೂನಂ ಸರ್ನಾಯಕ್‌ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೊಂದು ‌ಪ್ರಮುಖ ಪಾತ್ರಧಾರಿ ಎಂದರೆ ಅದು ಕಾರು. ಮೂವರು ಪಾತ್ರಧಾರಿಗಳಿಗೂ ಒಂದೊಂದು ಕಥೆ ಇರುತ್ತದೆ. ಅವರೆಲ್ಲರೂ ಕಾರಣಾಂತರಗಳಿಂದ ಒಟ್ಟಿಗೆ ಸೇರುತ್ತಾರೆ. ಆ ನಂತರ ಏನೆಲ್ಲಾ ನಡೆಯುತ್ತದೆ ಎಂಬುದೇ ಚಿತ್ರದ ಕಥೆ. ಎಂಟು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ನೋಡದ ಒಂದಿಷ್ಟು ಅಪರೂಪದ ಲೊಕೇಶನ್‍ಗಳನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದರು.

ದೀಪಿಕಾ ದಾಸ್‍ ಮಾತನಾಡಿ, ‘ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ. ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನು ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ನಾನು ಪಾಯಲ್‍ ಎಂಬ ವ್ಲಾಗರ್‍ ಆಗಿ ಅಭಿನಯಿಸಿದ್ದೇನೆ. ಈ ಕಾರಿನ ಜೊತೆಗೆ ಇದೀಗ ನನಗೊಂದು ಗಾಢ ಸಂಬಂಧವಿದೆ. ಆ ಕಾರನ್ನು ನನಗೆ ಕೊಡಿ’ ಎಂದು ನಿರ್ಮಾಪಕರಿಗೆ ಮನವಿ ಮಾಡಿದರು.

‘#ಪಾರುಪಾರ್ವತಿ’ ಚಿತ್ರವನ್ನು EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ ಹರಿ ಸಂಗೀತ ಮತ್ತು ಅಬಿನ್‍ ರಾಜೇಶ್‍ ಛಾಯಾಗ್ರಹಣವಿದೆ.


(Nagini serial and Bigg Boss star Deepika Das stars in the film Paru Parvathi, set to release on January 31)

Leave a Reply

Your email address will not be published. Required fields are marked *