Ramesh Aravind as Daiji; ಘೋಷಣೆಯಾಗಿ ಒಂದೂವರೆ ವರ್ಷಗಳ ನಂತರ ‘ದೈಜಿ’ ಪ್ರಾರಂಭ

ರಮೇಶ್ ಅರವಿಂದ್ ಅಭಿನಯದ ‘ದೈಜಿ’ ಚಿತ್ರವು ಸುಮಾರು ಒಂದೂವರೆ ವರ್ಷಗಳ ಹಿಂದೆ ಘೋಷಣೆಯಾಗಿತ್ತು. ಆದರೆ, ಚಿತ್ರ ಮಾತ್ರ ಪ್ರಾರಂಭವಾಗಿರಲಿಲ್ಲ. ಚಿತ್ರದ ಬಹುತೇಕ ಚಿತ್ರೀಕರಣ ಲಂಡನ್‍ನಲ್ಲಿ ನಡೆಯುವುದರಿಂದ ಮತ್ತು ಚಿತ್ರತಂಡಕ್ಕೆ ವೀಸಾ ಸಿಗುವುದಕ್ಕೆ ವಿಳಂಬವಾಗಿದ್ದರಿಂದ, ಚಿತ್ರೀಕರಣ ಶುರುವಾಗಿರಲಿಲ್ಲ.

ಇದೀಗ ಕೊನೆಗೂ ‘ದೈಜಿ’ ಚಿತ್ರಕ್ಕೆ ಮುಹೂರ್ತವಾಗಿದೆ. ಭಾನುವಾರದ ಬೆಳಗಿನ ಸುಮುಹೂರ್ತದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇದು ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರವಾಗಿದ್ದು, ಈ ಹಿಂದೆ ‘ಶಿವಾಜಿ ಸುರತ್ಕಲ್’ ಮತ್ತು ‘ಶಿವಾಜಿ ಸುರತ್ಕಲ್ 2’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಆಕಾಶ್ ಶ್ರೀವತ್ಸ, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
‘ದೈಜಿ’ ಚಿತ್ರವನ್ನು ವಿಭಾ ಕಶ್ಯಪ್ ಸಂಸ್ಥೆಯಡಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ, ಧನಂಜಯ್ ಅಭಿನಯದ ‘ಬದ್ಮಾಶ್’, ‘ಸಾರಾಂಶ’ ಮುಂತಾದ ಚಿತ್ರಗಳನ್ನು ರವಿ ಕಶ್ಯಪ್ ನಿರ್ಮಿಸಿದ್ದರು. ಇನ್ನು, ಆಕಾಶ್ ಶ್ರೀವತ್ಸ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈ ಹಿಂದೆ ‘ಶಿವಾಜಿ ಸುರತ್ಕಲ್’ ಚಿತ್ರಗಳಲ್ಲಿ ರಮೇಶ್ ಅವರಿಗೆ ಜೋಡಿಯಾಗಿದ್ದ ರಾಧಿಕಾ ನಾರಾಯಣ್, ಈ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಹಲವು ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ದೈಜಿ’ ಚಿತ್ರದ ಚಿತ್ರೀಕರಣ ಅತೀ ಶೀಘ್ರದಲ್ಲಿ ವಿದೇಶದಲ್ಲಿ ಪ್ರಾರಂಭವಾಗಲಿದ್ದು, ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದಲ್ಲದೆ, ‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲೂ ರಮೇಶ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಆ ಚಿತ್ರ ಸಹ ಇದೇ ವರ್ಷ ಬಿಡುಗಡೆಯಾಗಲಿದೆ.


(Ramesh Arvind’s 106th film has been titled Daiji, and will be directed by Akash Srivatsa)