Game Changer; ತೆಲುಗಿನ ‘ಗೇಮ್‍ ಚೇಂಜರ್’ನಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ

Game Changer Ram Charan

ದೊಡ್ಡ ಬಜೆಟ್‍ನ ಮತ್ತು ಬಹುನಿರೀಕ್ಷೆಯ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆದಾಗಲೆಲ್ಲಾ, ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುತ್ತದೆ. ಇದೀಗ ರಾಮ್‍ಚರಣ್‍ ತೇಜ ಅಭಿನಯದ ‘ಗೇಮ್‍ ಚೇಂಜರ್‍’ ಚಿತ್ರದಿಂದ ತಮಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ‘ಛೂ ಮಂತರ್’ ನಿರ್ಮಾಪಕ ತರುಣ್ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಇಂದು ಶರಣ್‍ ಅಭಿನಯದ ‘ಛೂ ಮಂತರ್’, ‘ಟೆಡ್ಡಿ ಬೇರ್‍’ ಮತ್ತು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ತೆಲುಗಿನ ನಿರೀಕ್ಷಿತ ಚಿತ್ರವಾದ ರಾಮ್‍ಚರಣ್‍ ತೇಜ ಅಭಿನಯದ ‘ಗೇಮ್‍ ಚೇಂಜರ್‍’ ಸಹ ಬಿಡುಗಡೆಯಾಗುತ್ತಿದೆ. ಈ ಚಿತ್ರದಿಂದ ಕನ್ನಡ ಚಿತ್ರಗಳಿಗೆ ಪ್ರದರ್ಶನವೇ ಸಿಗುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

‘ಗೇಮ್‍ ಚೇಂಜರ್‍’ ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಕನ್ನಡದ ಅವತರಣಿಕೆಗೆ ಕಡಿಮೆ ಸಂಖ್ಯೆಯ ಪ್ರದರ್ಶನಗಳು ಸಿಕ್ಕಿವೆ. ಮಿಕ್ಕಂತೆ ತೆಲುಗು ಅವತರಣಿಕೆಗೆ ನೂರಾರು ಪ್ರದರ್ಶನಗಳು ಸಿಕ್ಕಿದ್ದು, ‘ಗೇಮ್‍ ಚೇಂಜರ್‍’ ಬೆಳಿಗ್ಗೆ 6.00ರಿಂದ ಪ್ರದರ್ಶನ ಪ್ರಾರಂಭವಾಗಲಿದೆ. ಇನ್ನು, ಟಿಕೆಟ್‍ ಬೆಲೆ ಸಹ ಹೆಚ್ಚಾಗಿದ್ದು, ಕೆಲವು ಚಿತ್ರಮಂದಿರಗಳಲ್ಲಿ 500 ರೂ.ವರೆಗೂ ಟಿಕೆಟ್‍ ಬೆಲೆಯನ್ನು ಏರಿಸಲಾಗಿದೆ.

ಇದರಿಂದ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ ಎಂದು ಗುರುವಾರ ಮಧ್ಯಾಹ್ನ, ‘ಛೂ ಮಂತರ್‍’ ನಿರ್ಮಾಪಕ ತರುಣ್‍ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಟ್ಟಿದ್ದಾರೆ.

ಈ ಸಂಬಂಧ ಮಾತನಾಡಿರುವ ತರುಣ್‍ ಶಿವಪ್ಪ, ‘ನಮ್ಮ ಚಿತ್ರಕ್ಕೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಬಹುತೇಕ ಚಿತ್ರಮಂದಿರಗಳು ‘ಗೇಮ್‍ ಚೇಂಜರ್‍’ ಚಿತ್ರಕ್ಕೆ ಕೊಟ್ಟು, ಕನ್ನಡ ಚಿತ್ರಗಳಿಗೆ ಒಂದು ಪ್ರದರ್ಶನವನ್ನು ಮಾತ್ರ ಮೀಸಲಿಟ್ಟಿವೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಒಂದೊಂದು ಪ್ರದರ್ಶನವಿದೆ. ನೆಲಮಂಗಲದ ರೂಪ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನ ಸಿಕ್ಕಿದೆ. ಮೈಸೂರಿನಲ್ಲಿ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಮುಂತಾದ ನಗರಗಳಲ್ಲಿ ಚಿತ್ರಮಂದಿರಗಳು ಸಿಕ್ಕಿಲ್ಲ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾಲ್ಕು ದಿನಗಳ ಹಿಂದೆಯೇ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ಪತ್ರಿಕಾಗೋಷ್ಠಿ ನಡೆದ ಮೇಲಾದರೂ ಏನಾದರೂ ಪ್ರಯೋಜನವಾಯಿತಾ? ಎಂದರೆ ಅದೂ ಇಲ್ಲ. ‘ಗೇಮ್ ಚೇಂಜರ್‍’ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದರೆ, ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಚಿತ್ರತಂಡದವರು ದೂರುತ್ತಲೇ ಇದ್ದಾರೆ.

Leave a Reply

Your email address will not be published. Required fields are marked *