ಹುಚ್ಚನಿಂದ ಸ್ಫೂರ್ತಿ ಪಡೆದು ‘ತುರ್ರಾ’ ಹಾಡು ಬರೆದ ಯೋಗರಾಜ್ ಭಟ್

‘ಮನದ ಕಡಲು’ ಚಿತ್ರಕ್ಕೆ ಸಂಬಂಧಿಸಿದಂತೆ ವಾರಕ್ಕೊಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಮೊದಲು ಚಿತ್ರದ ಮೊದಲ ನೋಟ ಬಿಡುಗಡೆಯಾಯಿತು. ಆ ನಂತರ ‘ಹೂ ದುಂಬಿಯ ಕಥೆಯ’ ಎಂಬ ಹಾಡನ್ನು ಅವರು ಬಿಡುಗಡೆ ಮಾಡಿದರು. ಈಗ ಚಿತ್ರದ ಎರಡನೇ ಹಾಡನ್ನು ಇದೀಗ ಬಿಡುಗಡೆ ಮಾಡಲಾಗಿದೆ.
‘ತುರ್ರಾ’ ಎಂಬ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವಿ. ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ನೆಲಮಂಗಲದ ಬಳಿಯಿರುವ ನಿರ್ಮಾಪಕ ಈ ಕೃಷ್ಣಪ್ಪ ಅವರ ತೋಟದಲ್ಲಿ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಹಾಡಿನ ಕುರಿತು ಮಾತನಾಡುವ ಯೋಗರಾಜ್ ಭಟ್, ‘ನನ್ನ ಹಾಗೂ ವಿ. ಹರಿಕೃಷ್ಣ ಅವರ ಕಾಂಬೋದಲ್ಲಿ ಮೂಡಿಬಂದಿರುವ ಅರ್ಥವಿಲ್ಲದ ಹಾಡುಗಳು ಸಾಕಷ್ಟು ಹಿಟ್ ಆಗಿದೆ. ಆ ಅನರ್ಥದ ಹಾಡಗಳಿಗೆ ಈ ‘ತುರ್ರಾ’ ಸೇರ್ಪಡೆಯಾಗಿದೆ. ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅಲಿಮಾ ಎಂಬ ಹುಚ್ಚ ಇದ್ದ. ಆತನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ ಆತನ ಹಿಂದೆ ಸುತ್ತುತ್ತಿದ್ದೆವು. ಆತ ‘ಬೊಂಬುವೈ ಟುರ್ರವೈ’ ಎಂಬ ಪದ ಬಳಸುತ್ತಿದ್ದ. ಆ ಪದವೇ ಈ ‘ತುರ್ರಾ’ ಹಾಡು ಬರೆಯಲು ಸ್ಪೂರ್ತಿ. ವಿ. ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ. ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಕೃಷ್ಣಪ್ಪ ಅವರ ಈ ತೋಟದಲ್ಲೇ ಚಿತ್ರ ಅರಂಭವಾಗಿದ್ದು, ಇವತ್ತು ಇದೇ ಸ್ಥಳದಲ್ಲೇ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ ಹಾಗೂ ಎರಡನೇ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ’ ಎಂದರು ನಿರ್ದೇಶಕ ಯೋಗರಾಜ್ ಭಟ್.
ವಿ. ಹರಿಕೃಷ್ಣ ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ಒಂದೊಂದು ಪದ ಹಾಡುವಾಗಲೂ ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆಯ ಹಾಡು ಬರೆದಿದ್ದಾರೆ’ ಎಂದು ವಿ. ಹರಿಕೃಷ್ಣ ತಿಳಿಸಿದರು.
ಯೋಗರಾಜ್ ಭಟ್ ಚಿತ್ರೀಕರಣದ ಸಮಯದಲ್ಲೂ ಇಂತಹ ಪದಗಳನ್ನು ಬಳಸುತ್ತಿರುತ್ತಾರಂತೆ. ಹಾಗಂತ ಹೇಳಿದವರು ಸುಮುಖ. ‘ಈಗ ಆ ಪದಗಳನ್ನೇ ಬಳಸಿ ಹಾಡು ಬರೆದಿದ್ದಾರೆ. ಈ ಹಾಡು ತುಂಬಾ ಚೆನ್ನಾಗಿದೆ. ಈ ಜಾಗದಲ್ಲೇ ನಮ್ಮ ಚಿತ್ರ ಆರಂಭವಾಗಿದ್ದು, ಈಗ ಇದೇ ಜಾಗದಲ್ಲಿ ಹಾಡು ಬಿಡುಗಡೆಯಾಗಿರುವುದು ಖುಷಿಯಾಗಿದೆ’ ಎಂದರು.
‘ಮನದ ಕಡಲು’ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.
