Unlock Raghava; ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಬಿಡುಗಡೆ ಆಯಿತು ‘ಲಾಕ್ ಲಾಕ್’ ಹಾಡು

ಮಿಲಿಂದ್ ಮತ್ತು ರಚೆಲ್ ಡೇವಿಡ್ ಅಭಿನಯದ ‘ಅನ್‍ಲಾಕ್ ರಾಘವ’ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ, ಚಿತ್ರದ ‘ಲಾಕ್ ಲಾಕ್’ ಎಂಬ ಹಾಡು ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಮಂಗಳವಾರ ಬೆಳಿಗ್ಗೆ ಬಿಡುಗಡೆಯಾಗಿದೆ.
‘ಲಾಕ್ ಲಾಕ್ …’ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಎ2 ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಇದು ಈ ಚಿತ್ರದಿಂದ ಬಿಡುಗಡೆಯಾಗುತ್ತಿರುವ ಚಿತ್ರದ ಎರಡನೇ ಹಾಡಾಗಿದೆ.
ಈ ಹಾಡಿನಲ್ಲಿ ನೋಡಿರುವ ಎನರ್ಜಿ ಇಡೀ ಸಿನಿಮಾದಲ್ಲಿ ಇದೆ ಎಂದು ಮಾತನಾಡಿದ ನಿರ್ದೇಶಕ ದೀಪಕ್ ಮಧುವನಹಳ್ಳಿ, ‘ನಮ್ಮ ಚಿತ್ರಕ್ಕೆ ಸಂಯೋಜನೆಯಾದ ಮೊದಲ ಹಾಡು ಇದು. ಆದರೆ, ಕೊನೆಯದಾಗಿ ವಾಯ್ಸ್ ಮಿಕ್ಸಿಂಗ್ ಮಾಡಲಾಯಿತು. ವಿಜಯ್ ಪ್ರಕಾಶ್ ಅವರಿಂದ ಮೊದಲೇ ಹಾಡಿಸಿದ್ದರೆ, ಅವರ ಶೈಲಿಗೆ ತಕ್ಕ ಹಾಗೆ ಇನ್ನಷ್ಟು ಚೆನ್ನಾಗಿ ಚಿತ್ರೀಕರಣ ಮಾಡಬಹುದಿತ್ತು. ಇದು ಚಿತ್ರದ ಶೀರ್ಷಿಕೆ ಗೀತೆಯಾಗಿದ್ದು, ಮುರಳಿ ಮಾಸ್ಟರ್ ಬಹಳ ಚೆನ್ನಾಗಿ ಹಾಡನ್ನು ನಿರ್ದೇಶಿಸಿಕೊಟ್ಟಿದ್ದಾರೆ’ ಎಂದರು.
ಈ ಹಾಡಿನ ಕುರಿತು ಮಾತನಾಡುವ ಮಿಲಿಂದ್, ‘ನನಗೆ ನಿರ್ದೇಶಕರು ಮೊದಲ ಸಲ ಕಾರಿನಲ್ಲಿ ಈ ಹಾಡು ಕೇಳಿಸಿದರು. ಹಾಡು ಕೇಳಿ ಬಹಳ ಖುಷಿಯಾಯಿತು. ಆನಂತರ ಮುರಳಿ ಮಾಸ್ಟರ್ ಜೊತೆಗೆ ಚರ್ಚೆ ಮಾಡಿ, ಹಾಡಿಗೆ ಹೆಜ್ಜೆ ಹಾಕಿದೆ. ಇದು ನನ್ನನ್ನು ಚಿತ್ರದಲ್ಲಿ ಪರಿಚಯಿಸುವ ಗೀತೆ ಕೂಡ. ಚಿತ್ರದ ಮೂರು ಹಾಡುಗಳಲ್ಲಿ ನನ್ನಗಿಷ್ಟವಾದ ಹಾಡು ಇದು. ಸುಂದರ ಹಾಡು ಕೊಟ್ಟ ಪ್ರಮೋದ್ ಮರವಂತೆ ಅವರಿಗೆ, ಸಂಗೀತ ಅನೂಪ್ ಸೀಳಿನ್ ಅವರಿಗೆ ಧನ್ಯವಾದ. ನನ್ನ ಮೊದಲ ಚಿತ್ರದ ಮೊದಲ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿರುವುದು ಹೆಚ್ಚು ಖುಷಿಯಾಗಿದೆ’ ಎಂದರು.
ನಿರ್ಮಾಪಕ ಮಂಜುನಾಥ್ ದಾಸೇಗೌಡ ಅವರಿಗೆ ಈ ಹಾಡನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಬೇಕು ಎಂಬ ಆಸೆ ಇತ್ತಂತೆ. ‘ನಾವು ಮೂಲತಃ ಶಿವಮೊಗ್ಗದವರು. ನಮ್ಮೂರಿನಲ್ಲೇ ಈ ಹಾಡು ಬಿಡುಗಡೆಯಾಗಿದ್ದು ಸಂತೋಷವಾಗಿದೆ. ನಾನು ಹಾಗೂ ಗಿರೀಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ನನ್ನ ಮಗ ಮಿಲಿಂದ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ’ ಎಂದರು.
‘ಅನ್‍ಲಾಕ್ ರಾಘವ’ ಚಿತ್ರಕ್ಕೆ ಡಿ. ಸತ್ಯಪ್ರಕಾಶ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ ಮತ್ತು ಅನೂಪ್ ಸೀಳಿನ್ ಸಂಗೀತವಿದೆ. ಚಿತ್ರದಲ್ಲಿ ಮಿಲಿಂದ್, ರಚೆಲ್, ಸಾಧು ಕೋಕಿಲ, ಅವಿನಾಶ್, ಶೋಭರಾಜ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.