‘ಗದಾಧಾರಿ ಹನುಮಾನ್’ ಆದ Ravikiran; ಟೀಸರ್ ಬಿಡುಗಡೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು ಅವರ ಮಗ ರವಿಕಿರಣ್ (Ravikiran) ಅಲಿಯಾಸ್ ವೈಭವ್, ಈ ಹಿಂದೆ ‘ತಾರಕಾಸುರ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆ ನಂತರ ‘ಕೈಲಾಸ – ಕಾಸಿದ್ರೆ’ ಎಂಬ ಚಿತ್ರದಲ್ಲೂ ನಟಿಸಿದ್ದರು. ಈ ಮಧ್ಯೆ, ‘ಅಪ್ಪು ಅಭಿಮಾನಿ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರದ ಮೊದಲ ನೋಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.
‘ಅಪ್ಪು ಅಭಿಮಾನಿ’ ಚಿತ್ರದ ಬಿಡುಗಡೆಗೂ ಮೊದಲೇ ರವಿಕಿರಣ್ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸಿ ಮುಗಿಸಿದ್ದು, ಆ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್‍ಜಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟೀಸರ್ ಮಹಾಲಕ್ಷ್ಮೀ ಲೇಔಟ್‍ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಎಂ. ನರಸಿಂಹಲು, ಶಿಲ್ಪಾ ಶ್ರೀನಿವಾಸ್, ಎಂ.ಎನ್. ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಚಿತ್ರವನ್ನು ವಿರಾಬ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್ ಕೆ.ಆರ್ ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಇದೊಂದು ಫ್ಯಾಂಟಸಿ, ಹಾರರ್ ಮತ್ತು ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಿ ಬಿಡುಗಡೆಯಾಗುತ್ತಿದೆ.
‘ಗದಾಧಾರಿ ಹನುಮಾನ್’ ಚಿತ್ರದ ಕುರಿತು ಮಾತನಾಡುವ ರವಿಕಿರಣ್, ‘ನಾನು ಚಿತ್ರ ಮಾಡುವುದು ಬಿಟ್ಟುಬಿಟ್ಟೆನಾ ಎಂದು ಹಲವರು ಕೇಳಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ನಾನು ಖಂಡಿತಾ ಅಭಿನಯಿಸುತ್ತೇನೆ. ಈ ಚಿತ್ರದಲ್ಲಿ ಒಳ್ಳೆಯ ಕಥೆ ಇದ್ದ ಕಾರಣ, ಚಿತ್ರವನ್ನು ಒಪ್ಪಿಕೊಂಡೆ. ಇನ್ನು, ಮುಂದೆ ಆರು ತಿಂಗಳಿಗೊಂದು ಚಿತ್ರ ಬರುತ್ತಿರುತ್ತದೆ. ಈ ಚಿತ್ರದ ಚಿತ್ರೀಕರಣ 2023ರಲ್ಲಿ ಶುರುವಾಗಿ, 2024ರ ಫೆಬ್ರವರಿ ಹೊತ್ತಿಗೆ ಮುಗಿಯಿತು. ಈ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಮೂರ್ನಾಲ್ಕು ಸಂಸ್ಥೆಗಳಲ್ಲಿ ನಡೆದಿದೆ. ಒಳ್ಳೆಯ ಔಟ್‍ಪುಟ್ ಬರುವವರೆಗೂ ನಿರ್ಮಾಪಕರು ಕಾದು ಗ್ರಾಫಿಕ್ಸ್ ಕೆಲಸ ಮಾಡಿಸಿದ್ದಾರೆ. ಇಡೀ ಕುಟುಂಬ ಸಮೇತ ಒಟ್ಟಿಗೆ ನೋಡುವ ಚಿತ್ರ. ಮೊದಲಾರ್ಧ ಹಾರರ್ ಇರುತ್ತದೆ. ದ್ವಿತೀಯಾರ್ಧ ಬೇರೆಯದೇ ರೂಪ ಪಡೆಯುತ್ತದೆ. ಎಲ್ಲರಿಗೂ ಇಷ್ಟವಾದ ಚಿತ್ರದೊಂದಿಗೆ ಬಂದಿದ್ದೇನೆ’ ಎಂದು ಹೇಳಿದರು.
ಈ ಚಿತ್ರದಲ್ಲಿ ರವಿಕಿರಣ್‍ಗೆ ನಾಯಕಿಯಾಗಿ ಹರ್ಷಿತಾ ನಟಿಸಿದ್ದು, ಜೊತೆಗೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ಮುಂತಾದವರು ನಟಿಸಿದ್ದಾರೆ.
‘ಗದಾಧಾರಿ ಹನುಮಾನ್’ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣವಿದ್ದು, ಬೆಂಗಳೂರು, ಹಂಪಿ, ಗಂಗಾವತಿ, ಅಂಜನಾದ್ರಿ, ಕಿತ್ತೂರು, ಹೊನ್ನಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
One thought on “‘ಗದಾಧಾರಿ ಹನುಮಾನ್’ ಆದ Ravikiran; ಟೀಸರ್ ಬಿಡುಗಡೆ”