ಮದುವೆ ಸಂಭ್ರಮದಲ್ಲಿ ತನ್ನೂರಿನ ಶಾಲೆಗೆ ಹೈಟೆಕ್ ಸ್ಪರ್ಶ ಕೊಡಿಸಿದ ಧನಂಜಯ್

ನಟ-ನಿರ್ಮಾಪಕ ಧನಂಜಯ್ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 16ರಂದು ಅವರು ಮೈಸೂರಿನಲ್ಲಿ ಧನ್ಯತಾ ಜೊತೆಗೆ ವಿವಾಹವಾಗಲಿದ್ದು, ಅದಕ್ಕೂ ಮೊದಲು ಸಮಯ ಸಿಕ್ಕಾಗಲೆಲ್ಲಾ ಗಣ್ಯರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಈಗಾಗಲೇ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರಿಗೆ ಮದುವೆಗೆ ಆಮಂತ್ರಣ ನೀಡಿದ್ದಾರೆ.
ಈ ಮಧ್ಯೆ, ಅವರು ತಾವು ಹುಟ್ಟಿದ ಊರಿನ ಶಾಲೆಯಲ್ಲಿ ಓದದೇ ಇದ್ದರೂ ತವರೂರಿನ ಶಾಲೆಗೆ ಹೊಸ ರೂಪ ನೀಡುತ್ತಿದ್ದಾರೆ. ತಮ್ಮ ಮದುವೆಯ ಸಂದರ್ಭವನ್ನು ಸಾರ್ಧಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುವ ಕೆಲಸವನ್ನು ಧನಂಜಯ್ ಮಾಡುತ್ತಿದ್ದಾರೆ.
ಧನಂಜಯ್ ತಮ್ಮ ಊರಾದ ಕಾಳೇನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಸದ್ಯ 80 ಮಕ್ಕಳು ಕಲಿಯುತ್ತದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್ ಹಾಕಿಸುವುದರ ಜೊತೆಗೆ, ಬಣ್ಣಮಾಸಿದ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸುತ್ತಿದ್ದಾರೆ. ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯಕ್ಕೆ ಸುಸ್ಥಿತಿ, ಅಚ್ಚುಕಟ್ಟು ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ … ಹೀಗೆ ತನ್ನೂರಿನ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.
ತಾವು ಈ ಶಾಲೆಯಲ್ಲಿ ಓದದೇ ಇದ್ದರೂ ಕೂಡ ತಮ್ಮೂರಿನ ಶಾಲೆ ಚೆನ್ನಾಗಿರಬೇಕು ಹಾಗೂ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅನ್ನೋದು ಧನಂಜಯ್ ಉದ್ದೇಶವಂತೆ. ಅವರ ಈ ಕೆಲಸಕ್ಕೆ ಊರಿನ ಗ್ರಾಮಸ್ಥರು ಸಹಾಯಹಸ್ತ ನೀಡುವುದರ ಜೊತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಧನಂಜಯ್, ‘ನನ್ನೂರಿನ ಶಾಲೆ ಚೆನ್ನಾಗಿರಬೇಕು. ಹಾಜರಾತಿ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳು ಉಳಿಯಬೇಕು ಅನ್ನೋದಷ್ಟೇ ಉದ್ದೇಶ’ ಎಂದು ಹೇಳಿದ್ದಾರೆ.