ಏಕಕಾಲಕ್ಕೆ ಆರು ಚಿತ್ರಗಳನ್ನು ಘೋಷಿಸಿದ Amrita Cine Craft ಸಂಸ್ಥೆ

ಕೆಲವು ವರ್ಷಗಳ ನಂತರ ನಟಿ ಪೂಜಾ ಗಾಂಧಿ, ಫಿಲ್ಮ್ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ 10 ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು. ಆ ಪೈಕಿ ಮೂರು ಚಿತ್ರಗಳ ಹೆಸರುಗಳನ್ನು ಸಹ ಅವರು ಘೋಷಿಸಿದ್ದರು. ಆದರೆ, ಯಾವೊಂದು ಚಿತ್ರವೂ ಸೆಟ್ಟೇರಲಿಲ್ಲ. ಇನ್ನು, ಕಳೆದ ವರ್ಷ ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಒಂದೇ ವೇದಿಕೆಯಲ್ಲಿ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಈ ಪೈಕಿ ಒಂದು ಚಿತ್ರ ಮಾಡಿ ಸೆಟ್ಟೇರಿ ಮುಗಿದಿದೆ.
ಈಗ್ಯಾಗೆ ಈ ಮಾತು ಎಂದರೆ, ಹೊಸ ಸಂಸ್ಥೆಯೊಂದು ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಆರು ಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಬೆಂಗಳೂರಿನ ಉದ್ಯಮಿ ವಿಜಯ್ ಟಾಟಾ ಮತ್ತು ಅವರ ಪತ್ನಿ ಅಮೃತಾ ಟಾಟಾ ಇತ್ತೀಚೆಗೆ ಅಮೃತ ಸಿನಿ ಕ್ರಾಫ್ಟ್ (Amrita Cine Craft) ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರಡಿ ಆರು ಹೊಸ ಚಿತ್ರಗಳನ್ನು ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ವಿ. ರವಿಚಂದ್ರನ್, ಶ್ರೀ ಮುರಳಿ ಮುಂತಾದವರು ಈ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡುವುದರ ಜೊತೆಗೆ ಹೊಸ ಚಿತ್ರತಂಡಗಳಿಗೆ ಶುಭಾಶಯ ಕೋರಿದರು.

ಅಮೃತಾ ಸಿನಿ ಕ್ರಾಫ್ಟ್ ನಿರ್ಮಾಣದ ಮೊದಲ ಚಿತ್ರದಲ್ಲಿ ಅಜೇಯ್ ರಾವ್ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗುತ್ತಿದ್ದಾರೆ. ಎರಡನೇ ಚಿತ್ರವನ್ನು ಡಿ.ಎಸ್.ಪಿ ವರ್ಮ ನಿರ್ದೇಶಿಸಿದರೆ, ವಿನಯ್ ರಾಜಕುಮಾರ್ ನಾಯಕನಾಗಿ ಕಣಿಸಿಕೊಳ್ಳುತ್ತಿದ್ದಾರೆ. ‘ಸಿಂಪಲ್’ ಸುನಿ ಮೂರನೇ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರು ಈ ಬಾರಿ ಯಾರ ಜೊತೆಗೆ ನಿರ್ದೇಶಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ನಾಲ್ಕನೆಯದನ್ನು ರಿಷಬ್ ಆರ್ಯ ನಿರ್ದೇಶಿಸಲಿದ್ದು, ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸುತ್ತಿದ್ದಾರೆ. ಐದನೇ ಚಿತ್ರದ ಮೂಲಕ ನಟ ಪ್ರಶಾಂತ್ ಸಿದ್ದಿ ನಿರ್ದೇಶಕರಾದರೆ, ವಿಕ್ಕಿ ವರುಣ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಆರನೇ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಹೀರೋ ಯಾರೆಂದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಆರು ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿದ್ದು , ಏಳನೇ ಚಿತ್ರವನ್ನು ವಿ. ರವಿಚಂದ್ರನ್ ನಿರ್ದೇಶಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ ನಿರ್ಮಾಪಕ ವಿಜಯ್ ಟಾಟಾ, ‘ನಾವು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ, ಅರ್ಧಕ್ಕೆ ನಿಂತಿರುವ ಚಿತ್ರಗಳಿಗೂ ಬೆಂಬಲ ಕೊಡಬೇಕು ಎಂದು ಹೆಜ್ಜೆ ಇಟ್ಟಿದ್ದೇವೆ. ನಮ್ಮ ಉದ್ದೇಶ ಒಂದೆರಡು ಚಿತ್ರಗಳನ್ನು ಮಾಡಿ ಹೋಗುವುದಲ್ಲ. ನಿರಂತರವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನಿರ್ಧರಿಸಿದ್ದೇವೆ. ಪ್ರತಿ ಶುಕ್ರವಾರವೂ ನಮ್ಮ ಸಂಸ್ಥೆಯು ಒಂದಲ್ಲ ಒಂದು ಕನ್ನಡ ಚಿತ್ರಗಳ ಜೊತೆ ಇದ್ದೇ ಇರುತ್ತೇವೆ. ಹಾಗೆಯೆ ಪರಭಾಷಾ ಚಿತ್ರಗಳಿಗೆ ಸವಾಲು ಒಡ್ಡುವುದಕ್ಕೆ ಕೊಡಲು ಸಿದ್ಧರಿದ್ದೇವೆ’ ಎಂದರು.

ಇದನ್ನೂ ಓದಿ:-
One thought on “ಏಕಕಾಲಕ್ಕೆ ಆರು ಚಿತ್ರಗಳನ್ನು ಘೋಷಿಸಿದ Amrita Cine Craft ಸಂಸ್ಥೆ”