ಬಣ್ಣದ ಲೋಕದಿಂದ ಅಗಲಿದ ಅಭಿನಯ ಸರಸ್ವತಿ; ಬಿ. ಸರೋಜಾದೇವಿ ಗಣ್ಯರಿಂದ ಸಂತಾಪದ ನುಡಿ

ಬೆಂಗಳೂರು: ಚತುರ್ಭಾಷಾ ತಾರೆಯಾಗಿ ಸುಮಾರು 200 ಚಿತ್ರಗಳಲ್ಲಿ ನಟಿ, ಅಭಿನಯ ಸರಸ್ವತಿ, ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂಬ ಹೆಸರುಗಳಿಂದ ಕರೆಯಿಸಿಕೊಂಡಿದ್ದ ಕನ್ನಡದ ಮೊದಲ ಸೂಪರ್ಸ್ಟಾರ್ ಅಭಿನೇತ್ರಿ ಬಿ. ಸರೋಜಾದೇವಿ.
17ನೇ ವಯಸ್ಸಿನಲ್ಲೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂದೂ ಕರೆದರು. ಸರೋಜಾದೇವಿ ಅವರು ತಮ್ಮ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (1955) ಮೂಲಕ ದೊಡ್ಡ ಅವಕಾಶ ಪಡೆದರು. ಪಾಂಡುರಂಗ ಮಹಾತ್ಯಂ (1957) ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1970ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (1958) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1967ರಲ್ಲಿ ಅವರ ಮದುವೆಯ ನಂತರ, ಅವರು 1974ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಮುಂದುವರೆದರು.
1958ರಿಂದ 1980ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮುಂದುವರೆದರು. ಪೈಘಮ್ (1959) ದಿಂದ ಪ್ರಾರಂಭಿಸಿ 1960ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು.
1955ರಿಂದ 1984ರ ನಡುವಿನ 29ವರ್ಷಗಳಲ್ಲಿ ಸತತ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸರೋಜಾ ದೇವಿಯವರು 1969ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ, ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದರು.
ಗಣ್ಯರಿಂದ ಸಂತಾಪ:-
ನಟಿಯ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕನ್ನಡದ ಹಿರಿಯ ನಟಿ ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ಅಭಿನಯ ಸರಸ್ವತಿಗೆ ಪ್ರೀತಿಯ ವಿದಾಯ. ಕನ್ನಡದ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಸರೋಜಾ ದೇವಿ ಅವರ ನಿಧನದ ಸುದ್ದಿ ನೋವು ತಂದಿದೆ. ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ. ಅಪಾರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಸರೋಜಾದೇವಿ ಅವರು ನಿಧನದ ಸುದ್ದಿ ಕೇಳಿ ದುಃಖವಾಯಿತು. ಮೇರುನಟರಾದ ಡಾ.ರಾಜ್ ಕುಮಾರ್ ಅವರು ಸೇರಿದಂತೆ ಭಾರತದ ಎಲ್ಲಾ ಭಾಷೆಗಳ ದಿಗ್ಗಜ ನಾಯಕ ನಟರೆಲ್ಲರ ಜತೆ ನಟಿಸಿದ್ದ ಸರೋಜಾದೇವಿ ಅವರು, ಅಭಿಮಾನಿಗಳ ಪಾಲಿಗೆ ಅಭಿನಯ ಸರಸ್ವತಿ ಆಗಿದ್ದರು. ಅವರ ಅನನ್ಯ ಅಭಿನಯ ನಮ್ಮೆಲ್ಲರನ್ನೂ ಮಂತ್ರ ಮುಗ್ಧರನ್ನಾಗಿ ಮಾಡುತ್ತಿತ್ತು.
ಕನ್ನಡ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸುವಲ್ಲಿ ಅಪಾರ ಕಾಣಿಕೆ ನೀಡಿರುವ ಅವರು; ಕಿತ್ತೂರು ಚೆನ್ನಮ್ಮ, ಬಬ್ರುವಾಹನ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಗಲಿಕೆ ಚಿತ್ರರಂಗಕ್ಕೆ, ನಾಡಿಗೆ ಬಹುದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಇನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಇದು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸರೋಜಾದೇವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ನಾಳೆ ಹುಟ್ಟೂರಿನಲ್ಲಿ ನಟ ಸರೋಜಾದೇವಿ ಅಂತ್ಯಕ್ರಿಯೆ:-
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಸರೋಜಾದೇವಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.