MAHAAN MOVIE; ರೈತರ ಕುರಿತಾದ ಚಿತ್ರದಲ್ಲಿ ಹಳ್ಳಿಹುಡುಗಿಯಾದ ರಾಧಿಕಾ ನಾರಾಯಣ್ …

ವಿಜಯ್ ರಾಘವೇಂದ್ರ ಅಭಿನಯದ ‘ಮಹಾನ್’(MAHAAN) ಚಿತ್ರದ ಕುರಿತು ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಅದೆಷ್ಟು ಸುದ್ದಿಗಳು ಬರುತ್ತವೋ ಗೊತ್ತಿಲ್ಲ. ಇತ್ತೀಚೆಗಷ್ಟೇ, ಚಿತ್ರತಂಡಕ್ಕೆ ನಟ ಮಿತ್ರ ಸೇರ್ಪಡೆಯಾದ ಸುದ್ದಿಯೊಂದು ಕೇಳಿಬಂದಿತ್ತು. ಇದೀಗ ಚಿತ್ರಕ್ಕೆ ರಾಧಿಕಾ ನಾರಾಯಣ್ ಸೇರ್ಪಡೆಯಾಗಿರುವ ಸುದ್ದಿ ಬಂದಿದೆ.
ರಮೇಶ್ ಅರವಿಂದ್ ಅಭಿನಯಿಸುತ್ತಿರುವ ‘ದೈಜಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ರಾಧಿಕಾ, ವಿಜಯ್ ರಾಘವೇಂದ್ರ ಅಭಿನಯದ ‘ಮಹಾನ್’ ಚಿತ್ರಕ್ಕೂ ನಾಯಕಿಯಾಗಿ ಸೇರ್ಪಡೆಯಾಗಿದ್ದಾರೆ. ಇದೊಂದು ರೈತರ ಕುರಿತ ಚಿತ್ರವಾಗಿದ್ದು, ಇದರಲ್ಲಿ ರಾಧಿಕಾ ನಾರಾಯಣ್ ಹಳ್ಳಿಹುಡುಗಿಯಾಗಿ ನಟಿಸುತ್ತಿದ್ದಾರಂತೆ.

ಈ ಕುರಿತು ಮಾತನಾಡುವ ರಾಧಿಕಾ, ‘’ಮಹಾನ್’ ರೈತರ ಕುರಿತಾದ ಚಿತ್ರ. ಈ ಚಿತ್ರದಲ್ಲಿ ನಟಿಸಲು ನನಗೆ ಬಹಳ ಸಂತೋಷವಾಗಿದೆ. ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನನಗೆ ನಟಿಸಬೇಕೆಂಬ ಆಸೆಯಿತ್ತು. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನಿರ್ದೇಶಕರು ಇದೊಂದು ರೈತರ ಕುರಿತಾದ ಚಿತ್ರ ಎಂದು ಹೇಳಿದ ತಕ್ಷಣ ನನಗೆ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಹಳ್ಳಿಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ನಿರ್ದೇಶಕ ಪಿ.ಸಿ. ಶೇಖರ್ ಇದಕ್ಕೂ ಮೊದಲು ರಾಧಿಕಾ ಜೊತೆಗೆ ಎರಡ್ಮೂರು ಕಥೆಗಳನ್ನು ಚರ್ಚಿಸಿದ್ದರಂತೆ. ಆದರೆ, ಅದು ಸಾಧ್ಯವಾಗಿರಲಿಲ್ಲವಂತೆ. ಈ ಕುರಿತು ಮಾತನಾಡಿರುವ ಅವರು, ‘ಈ ಹಿಂದೆ ರಾಧಿಕಾ ನಾರಾಯಣ್ ಅವರ ಜೊತೆಗೆ ಎರಡು ಮೂರು ಕಥೆಗಳನ್ನು ಚರ್ಚಿಸಿದ್ದೆ. ಅದು ಆಗಿರಲಿಲ್ಲ. ಈಗ ನನ್ನ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ರಾಧಿಕಾ ನಾರಾಯಣ್ ಅವರು ನಟಿಸುತ್ತಿರುವುದು ಬಹಳ ಸಂತೋಷವಾಗಿದೆ. ಅವರ ಪಾತ್ರ ಕೂಡ ವಿಭಿನ್ನವಾಗಿರಲಿದೆ’ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.
ಈ ಚಿತ್ರವನ್ನು ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿದ್ದಾರೆ.
ಹೆಚ್ಚಿನ ಓದಿಗಾಗಿ;-
One thought on “MAHAAN MOVIE; ರೈತರ ಕುರಿತಾದ ಚಿತ್ರದಲ್ಲಿ ಹಳ್ಳಿಹುಡುಗಿಯಾದ ರಾಧಿಕಾ ನಾರಾಯಣ್ …”