ಶಿವರಾತ್ರಿಗೆ ‘ರಾಕ್ಷಸ’ನ ಆಗಮನ; ಹೊಸ ಅವತಾರದಲ್ಲಿ ಪ್ರಜ್ವಲ್‍

Prajwal Devaraj Rakshasa

ಪ್ರಜ್ವಲ್‍ ದೇವರಾಜ್‍ ಅಭಿನಯದ ‘ರಾಕ್ಷಸ’ ಚಿತ್ರವು ಕಳೆದ ವರ್ಷದ ಕೊನೆಯಲ್ಲೇ ಬಿಡುಗಡೆ ಆಗಲಿದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳು ಬಿಡುಗಡೆಯಾದ ಕಾರಣ, ಚಿತ್ರವು ಈ ವರ್ಷಕ್ಕೆ ಮುಂದೂಲ್ಪಟ್ಟಿತ್ತು. ಈ ವರ್ಷ ಚಿತ್ರ ಯಾವಾಗ ಬರಬಹುದು ಎಂಬ ವಿಷಯವನ್ನು ಚಿತ್ರತಂಡ ಇದೀಗ ಘೋಷಣೆ ಮಾಡಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರವು ಫೆ. 26ರಂದು ಬಿಡುಗಡೆಯಾಗಲಿದೆ.

‘ರಾಕ್ಷಸ’ ಚಿತ್ರವು ಒಂದು ಹಾರರ್‍ ಚಿತ್ರವಾಗಿದ್ದು, ಇದೇ ಮೊದಲ ಬಾರಿಗೆ ಪ್ರಜ್ವಲ್‍ ಈ ಶೈಲಿಯ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಭಾವನಾತ್ಮಕ ಕಥೆಯ ಜೊತೆಗೆ ಟೈಮ್‌ ಲೂಪ್‌ ಪರಿಕಲ್ಪನೆಯ ಸ್ಪರ್ಶ ಕೊಟ್ಟಿದ್ದಾರೆ ನಿರ್ದೇಶಕ ಲೋಹಿತ್. ಈ ಹಿಂದೆ ‘ಮಮ್ಮಿ’, ‘ದೇವಕಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್‍ಗೆ ಇದು ಪ್ರಜ್ವಲ್‍ ಜೊತೆಗೆ ಎರಡನೇ ಚಿತ್ರ. ಇದಕ್ಕೂ ಮೊದಲು ಪ್ರಜ್ವಲ್‍ ಅಭಿನಯದಲ್ಲಿ ‘ಮಾಫಿಯಾ’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದು, ಆ ಚಿತ್ರವು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಶಾನ್ವಿ ಎಂಟರ್‌ಟೈನ್ವೆಂಟ್ ನಡಿ ದೀಪು ಬಿ.ಎಸ್ ನಿರ್ಮಿಸಿರುವ ಈ ಚಿತ್ರದ ನಿರ್ಮಾಣದಲ್ಲಿ ನವೀನ್ ಹಾಗೂ ಮಾನಸ ಕೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಜೇಬಿನ್ ಪಿ ಜೋಕಬ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ ಮತ್ತು ವರುಣ್ ಉನ್ನಿ ಸಂಗೀತ ನಿರ್ದೇಶನವಿದೆ.

ಪ್ರಜ್ವಲ್ ಜೊತೆಗೆ ಈ ಚಿತ್ರದಲ್ಲಿ ಶೋಭರಾಜ್, ವತ್ಸಲಾ ಮೋಹನ್, ‘ಸಿದ್ಲಿಂಗು’ ಶ್ರೀಧರ್, ಆರ್ನ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ರಾಕ್ಷಸ ಸಿನಿಮಾದ ಶೇ.80ರಷ್ಟು ಚಿತ್ರೀಕರಣ ರಾಮೋಜಿ ಫಿಲ್ಮಂ ಸಿಟಿಯಲ್ಲಿ ನಡೆದಿರುವುದು ವಿಶೇಷ. ರಾಮೇಶ್ವರಂ, ಗೋವಾ, ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಲಾಗಿದೆ. ‘ರಾಕ್ಷಸ’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದೆ.

Leave a Reply

Your email address will not be published. Required fields are marked *