‘ಹೆಜ್ಜೆ ಮೂಡದ ಹಾದಿ’, ‘JUNGLE MANGAL’ ಆದಾಗ …

ನಿರ್ದೇಶಕ ರಕ್ಷಿತ್‍ ಕುಮಾರ್‌ ತಮ್ಮ ಚಿತ್ರದ ಟ್ರೇಲರನ್ನು ಯೋಗರಾಜ್‍ ಭಟ್ಟರಿಗೆ ತೋರಿಸುವುದಕ್ಕೆ ಹೋಗಿದ್ದರಂತೆ. ಟ್ರೇಲರ್‌ ನೋಡಿದ ಭಟ್ಟರು, ಚಿತ್ರಕ್ಕೆ ಏನು ಹೆಸರಿಟ್ಟಿದ್ದೀರಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರು ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಡುವುದಕ್ಕೆ ಯೋಚಿಸಿದ್ದರು. ಭಟ್ಟರು ಹೊಸ ಐಡಿಯಾ ಕೊಟ್ಟಿದ್ದಾರೆ. ‘ಜಂಗಲ್‍ ಮಂಗಲ್‍’ (JUNGLE MANGAL) ಎಂದಿಡಿ ಎಂದು ಸಲಹೆ ಕೊಟ್ಟಿದ್ದಾರೆ.

ಯಶ್‍ ಶೆಟ್ಟಿ ಅಭಿನಯದ ‘ಜಂಗಲ್‍ ಮಂಗಲ್‍’ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಸಹ್ಯಾದ್ರಿ ಸ್ಟುಡಿಯೋಸ್‍ ಬ್ಯಾನರ್‌ ಅಡಿ ಪ್ರಜೀತ್‍ ಹೆಗ್ಡೆ ಮುಂತಾದವರು ನಿರ್ಮಿಸಿರುವ ‘ಜಂಗಲ್‍ ಮಂಗಲ್‍’ ಚಿತ್ರಕ್ಕೆ ರಕ್ಷಿತ್‍ ಕುಮಾರ್‌ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಸಿಂಪಲ್‍ ಸುನಿ ತಮ್ಮ ಸುನಿ ಸಿನಿಮಾಸ್‍ ಬ್ಯಾನರ್‌ ಅಡಿ ಅರ್ಪಿಸುತ್ತಿದ್ದಾರೆ.

ಇಬ್ಬರಿಗೆ ಥ್ಯಾಂಕ್ಸ್ ಹೇಳುವ ಮೂಲಕ ಮಾತು ಶುರು ಮಾಡಿದ ನಿರ್ದೇಶಕ ರಕ್ಷಿತ್‍ ಕುಮಾರ್, ‘ಮೊದಲು ಈ ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಟ್ಟಿದ್ದೆ. ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ ‘ಜಂಗಲ್ ಮಂಗಲ್’ ಎಂಬ ಹೆಸರಿಡಿ ಎಂದು ಸಲಹೆ ನೀಡಿದರು. ಅದು ಬಹಳ ಕಾವ್ಯಾತ್ಮಕವಾಗಿರುತ್ತದೆ ಎಂಬ ಕಾರಣಕ್ಕೆ ಈ ಹೆಸರನ್ನು ಸೂಚಿಸಿದರು. ಸುನಿ ತಮ್ಮ ಬ್ಯಾನರ್‌ ಅಡಿ ಅರ್ಪಿಸುವುದಕ್ಕೆ ಮುಂದಾದರು’ ಎಂದರು.

ಎಲ್ಲಾ ಊರುಗಳಲ್ಲೂ ನಡೆಯಬಹುದಾದ ಕಥೆ ಎನ್ನುವ ರಕ್ಷಿತ್‍, ‘ಇಡೀ ಕಥೆ ಕಾಡಿನಲ್ಲಿ ನಡೆಯುತ್ತದೆ. ಇಲ್ಲಿ ನಾಯಕ-ನಾಯಕಿ ಕಾಡಿಗೆ ಹೋಗುತ್ತಾರೆ. ಅವರನ್ನು ಊರಿನ ಜನ ಹಿಂಬಾಲಿಸುತ್ತಾರೆ. ಊರಿನ ಜನರ ಮುಗ್ಧ ಕುತೂಹಲವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ಇದೊಂದು ಯೂನಿವರ್ಸಲ್‍ ಆದ ಕಥೆ. ಎಲ್ಲಿ ಬೇಕಾದರೂ ನಡೆಯಬಹುದು. ಅದನ್ನು ತಿಳಿಹಾಸ್ಯದೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.

‘ಸೂಜಿದಾರ’ ನಂತರ ಇದು ಯಶ್‍ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಎರಡನೇ ಚಿತ್ರ. ‘ನಾನು ನಾಯಕನಾಗಿ ನಟಿಸಲು ಒಪ್ಪಿಕೊಳ್ಳಲು ಕಥೆಯೇ ಕಾರಣ. ಆನಂತರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಕಥೆಯೇ ಕಾರಣ. ನಿಜ ಹೇಳಬೇಕೆಂದರೆ, ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ’ ಎಂದರು.

‘ಜಂಗಲ್‍ ಮಂಗಲ್‍’ ಚಿತ್ರದಲ್ಲಿ ಯಶ್‍ ಶೆಟ್ಟಿ, ಹರ್ಷಿತಾ ರಾಮಚಂದ್ರ, ‘ಉಗ್ರಂ’ ಮಂಜು, ದೀಪಕ್‍ ರೈ ಪಣಾಜೆ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ವಿಷ್ಣುಪ್ರಸಾದ್‍ ಛಾಯಾಗ್ರಹಣ, ಪ್ರಸಾದ್‍ ಕೆ. ಶೆಟ್ಟಿ ಸಂಗೀತ ಮತ್ತು ಮನು ಶೆಡ್ಗಾರ್ ಸಂಕಲನವಿದೆ.


ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

Leave a Reply

Your email address will not be published. Required fields are marked *

ಮಗಳ ಜೊತೆ ಮಿಲನಾ ನಾಗರಾಜ್‌ Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..