‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗಾಗಿ Ragini Dwivedi ಜೊತೆಗೆ ಕೈ ಜೋಡಿಸಿದ Kumar Bangarappa

‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಎಂಬ ಚಿತ್ರದಲ್ಲಿ ರಾಗಿಣಿ ದ್ವಿವೇದಿ (Ragini Dwivedi) ಅಪ್ಪಟ ಗ್ರಾಮೀಣ ಮಹಿಳೆಯಾಗಿ ಅಭಿನಯಿಸುತ್ತಿದ್ದಾರೆ ಎಂಬ ವಿಷಯ ಕೆಲವೇ ದಿನಗಳ ಹಿಂದೆ ಓದಿದ ನೆನಪಿರಬಹುದು. ಈಗ ಆ ಚಿತ್ರ ಸೆಟ್ಟೇರಿದೆ. ವಿಶೇಷವೆಂದರೆ, ಈ ಚಿತ್ರಕ್ಕೆ ಅವರ ಜೊತೆಗೆ ಕುಮಾರ್ ಬಂಗಾರಪ್ಪ (Kumar Bangarappa) ಸಹ ಬಂದು ಸೇರಿಕೊಂಡಿದ್ದಾರೆ.
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಹಿರಿಯ ನಟ ಶ್ರೀನಾಥ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ. ಹೆಚ್. ಮುನಿಯಪ್ಪ, ಶಾಸಕ ಎಲ್. ಶಿವರಾಮೇಗೌಡ, ನಿರ್ಮಾಪಕ ಭಾ. ಮ. ಹರೀಶ್, ಭಾ. ಮ. ಗಿರೀಶ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದ ಕುರಿತು ಮಾತನಾಡುವ ರಾಗಿಣಿ, ‘ನನಗೆ ಇದೊಂದು ಹೊಸ ತರಹದ ಪಾತ್ರ. ಪಕ್ಕಾ ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಹೇಗೆ ಎದುರಿಸಿ, ಬಡ ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸುತ್ತಾಳೆ ಎಂಬುದು ನನ್ನ ಪಾತ್ರ. ನಾನು ಈ ಸಿನಿಮಾದಲ್ಲಿ ಪಾರ್ವತಿ ಎಂಬ ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ಕಂಟೆಂಟ್ ಆಧಾರಿತ ಸಿನಿಮಾ. ಈ ಸಿನಿಮಾದಲ್ಲಿ ಹತ್ತಾರು ವಿಷಯಗಳಿವೆ. ಆ ವಿಷಯಗಳು ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿದೆ’ ಎಂದರು.
ಕುಮಾರ್ ಬಂಗಾರಪ್ಪ ಮಾತನಾಡಿ, ‘’ಸರ್ಕಾರಿ ನ್ಯಾಯಬೆಲೆ ಅಂಗಡಿ’ ಯಾರಿಗಾಗಿ ಇದೆ? ಯಾವ ಉದ್ದೇಶಕ್ಕಾಗಿ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ? ಈ ವ್ಯವಸ್ಥೆ ಹೇಗಿರಬೇಕು? ಅದರಲ್ಲಿರುವ ಲೋಪಗಳೇನು? ಎಂಬುದನ್ನು ತಿಳಿಸುವುದೇ ಈ ಸಿನಿಮಾದ ಉದ್ದೇಶ. ಇದು ಕೇವಲ ಸಿನಿಮಾ ಮಾತ್ರವಲ್ಲ. ಜನರಿಗೆ ಈ ಸರ್ಕಾರಿ ನ್ಯಾಯಬೆಲೆ ಅಂಗಡಿ ಒಳ-ಹೊರ ವ್ಯವಸ್ಥೆಯನ್ನು ಪರಿಚಯಿಸುವ ಒಂದು ಕಾರ್ಯಕ್ರಮ. ಬಹಳ ವರ್ಷಗಳ ನಂತರ ಇಂಥದ್ದೊಂದು ಸದಭಿರುಚಿ ಸಿನಿಮಾದಲ್ಲಿ ಒಂದು ಪಾತ್ರವಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾದಲ್ಲಿ ಜನಸಾಮಾನ್ಯನರ ಹೋರಾಟವಿದೆ. ಹೋರಾಟದ ಮೂಲಕ ಗೆಲ್ಲಬಹುದು ಎಂದು ಹೇಳುವಂಥ ಯಶಸ್ಸಿನ ಕಥೆಯಿದೆ’ ಎಂದರು.
ಈ ಚಿತ್ರಕ್ಕೆ ಸಾತ್ವಿಲ್ ಪವನ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಇದೊಂದು ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಮಹಿಳಾ ಪ್ರಧಾನ ಸಿನಿಮಾ. ನಮ್ಮ ನಡುವೆಯೇ ನಡೆಯುವಂಥ ಅನೇಕ ವಿಷಯಗಳನ್ನು ಈ ಸಿನಿಮಾದಲ್ಲಿ ಚರ್ಚಿಸಿದ್ದೇವೆ. ಈ ಸಿನಿಮಾ ಪ್ರತಿಯೊಬ್ಬ ನೋಡುಗರನ್ನೂ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಈ ಸಿನಿಮಾ ಬಹುಬೇಗ ಮನಮುಟ್ಟುತ್ತದೆ. ಅಂಬರೀಶ್ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮುಹೂರ್ತದ ಬಳಿಕ ಒಂದೇ ಹಂತದಲ್ಲಿ ಈ ಸಿನಿಮಾದ ಇಡೀ ಚಿತ್ರೀಕರಣ ನಡೆಯಲಿದೆ. ಇದೇ ವರ್ಷದ ಕೊನೆಯೊಳಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ’ ಎಂದರು.
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವನ್ನು ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಅನಂತ್ಸ ಆರ್ಯನ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದು:-
ಹೆಚ್ಚಿನ ಓದಿಗೆ :-
[…] ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ಎಸ್. ನಾರಾಯಣ್ ಸಂದೇಶ … […]
[…] ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ […]
[…] ಕೆಂಪೇಗೌಡರ ಕುರಿತು ಇನ್ನೊಂದು ಚಿತ್ರ; ಈ ಬಾರಿ AI ತಂತ್ರಜ್ಞಾನದಲ್ಲಿ […]
[…] […]
[…] 20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ […]
2 thoughts on “‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗಾಗಿ Ragini Dwivedi ಜೊತೆಗೆ ಕೈ ಜೋಡಿಸಿದ Kumar Bangarappa”