‘ಭಾರ್ಗವ’ನಾದ Upendra; Naganna ನಿರ್ದೇಶನದಲ್ಲಿ ಹೊಸ ಚಿತ್ರ

Upendra New Movie Bhargava By Naganna

‘UI’ ಚಿತ್ರದ ನಂತರ ಉಪೇಂದ್ರ (Upendra) ಯಾವೊಂದು ಚಿತ್ರವನ್ನೂ ಒಪ್ಪಿರುವ ಸುದ್ದಿ ಇರಲಿಲ್ಲ. ಈ ಮಧ್ಯೆ, ‘ಸೂರಪ್ಪ’ ಬಾಬು (Surappa Babu) ನಿರ್ಮಾಣದ ಮತ್ತು ನಾಗಣ್ಣ (Naganna) ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದೀಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.

ಯುಗಾದಿ ಹಬ್ಬದಂದು ಚಿತ್ರ ಘೋಷಣೆಯಾದಾಗಲೇ, ಅಕ್ಷಯ ತೃತೀಯ ದಿನದಂದು ಚಿತ್ರದ ಹೆಸರು ಘೋಷಣೆ ಆಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರದ ಘೋಷಣೆ ಆಗಿದ್ದು, ಚಿತ್ರಕ್ಕೆ ‘ಭಾರ್ಗವ’ ಎಂಬ ಹೆಸರು ಇಡಲಾಗಿದೆ. ಈ ಚಿತ್ರಕ್ಕೆ A Violent Family Man ಎಂಬ ಅಡಿಬರಹವಿದೆ.

ಕನ್ನಡ ಚಿತ್ರರಂಗ ಕಂಡ ಜನಪ್ರಿಯ ನಟ-ನಿರ್ದೇಶಕ ಜೋಡಿಗಳ ಪೈಕಿ ಉಪೇಂದ್ರ ಮತ್ತು ನಾಗಣ್ಣ ಅವರ ಜೋಡಿ ಸಹ ಒಂದು. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ ಜೋಡಿ ಮಾಡಿತ್ತು. ಇದೀಗ ಐದನೇ ಚಿತ್ರಕ್ಕೆ ಈ ಜೋಡಿ ಕೈಜೋಡಿಸಿದೆ.

ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ‘ಭಾರ್ಗವ’ ಚಿತ್ರ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಅರ್ಜುನ್ ‍ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಸದ್ಯ ಪ್ರೀ-ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಈ ಮಧ್ಯೆ, ಉಪೇಂದ್ರ ಅಭಿನಯದ ‘45’ ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿದ್ದು, ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ ಅವರು ನಟಿಸಿರುವ ತಮಿಳು ಚಿತ್ರ ‘ಕೂಲಿ’ ಸಹ ಬಿಡುಗಡೆ ಆಗಲಿದೆ. ಇದಲ್ಲದೆ, ‘ಬುದ್ಧಿವಂತ 2’ ಚಿತ್ರದಲ್ಲೂ ಅವರು ನಟಿಸಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಇದನ್ನೂ ಓದಿ:-


ಹೆಚ್ಚಿನ ಓದು:-

One thought on “‘ಭಾರ್ಗವ’ನಾದ Upendra; Naganna ನಿರ್ದೇಶನದಲ್ಲಿ ಹೊಸ ಚಿತ್ರ

Leave a Reply

Your email address will not be published. Required fields are marked *