Naniಗೆ ಇದು ಹೇಳಿಮಾಡಿಸಿದ್ದಲ್ಲ.., ರಕ್ತಸಿಕ್ತ ಚರಿತ್ರೆಯಲ್ಲಿ ಫ್ಯಾಮಿಲಿ ಸ್ಟಾರ್‌; HIT3 ಹೇಗಿದೆ?

Hit 3 Review

ಇದು ಬೆಂಗಳೂರಾ.. ಅಲ್ಲಾ ತೆಲುಗು ಭಾಷಿಕರ ನೆಲವೋ.. ಹೀಗೆ ಅನ್ನಿಸಿದ್ದು ಹಿಟ್‌ 3 ಚಿತ್ರ ನೋಡಿ ಹೊರಗೆ ಬಂದಾಗ. ಹೌದು ನಾನು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಿಂದ ಹೊರಬಂದಾಗ ಅಲ್ಲಿದ್ದ ತೆಲುಗು ಅಭಿಮಾನಿಗಳನ್ನು ಕಂಡಾಗ ಈ ಅನುಭವ ಆಯ್ತು. ಕರ್ನಾಟಕದಲ್ಲಿ ಕನ್ನಡ ಸಿನಿಮಾಕ್ಕಿಂತ ಪರ ಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರಿದ್ದಾರೆ. ಇದಕ್ಕೆ ಉದಾಹರಣೆಗಳು ಪ್ರತೀ ವಾರ ಸಿಗುತ್ತದೆ. ಅಲ್ಲದೇ ಈ ವಾರ ನಾನಿಯ ಹಿಟ್‌ 3ಗೆ ಎದುರಾಗಿ ಕನ್ನಡದ ಯಾವ ಸ್ಟಾರ್‌ ಸಿನಿಮಾವು ಇಲ್ಲ.

ಇದೆಲ್ಲಾ ಬಿಡುವ, ಚಿತ್ರದ ಬಗ್ಗೆ ಮಾತನಾಡುವ. ಶೈಲೇಶ್ ಕೋಲನು ಅವರು ಹಿಟ್‌ ಸಿನಿಮಾವನ್ನು ಸರಣಿಯಾಗಿ ಮಾಡುತ್ತಾ ಬರುತ್ತಿದ್ದಾರೆ. ವಿಶ್ವಕ್ ಸೇನ್ ಹಿಟ್‌ನ ಮೊದಲ ಕೇಸ್‌, ಅಡಿವಿ ಶೇಶ್ ಎರಡನೇ ಕೇಸ್‌ನಲ್ಲಿ ನಟಿಸಿದ್ದರು. ಮೂರನೇ ಪ್ರಕರಣವನ್ನು ನಾನಿ ಇನ್ವೆಸ್ಟಿಗೇಷನ್‌ ಮಾಡಿದ್ದಾರೆ. ಎರಡನೇ ಕೇಸ್‌ ಕೊನೆಯಲ್ಲೇ ನಾನಿ ಐಪಿಎಸ್‌ ಅರ್ಜುನ್ ಸರ್ಕಾರ್ ಆಗಿ ಕಾಣಿಸಿಕೊಂಡಿದ್ದರು. ಅದು ಈ ಚಿತ್ರಕ್ಕೆ ಹಿಂಟ್‌ ಆಗಿತ್ತು.

ಹಿಟ್‌ 3ನಲ್ಲಿ ಏನಿದೆ..?:-
ಕೋರ್ಟ್‌ಗೆ ಅರ್ಜುನ್‌ ಸರ್ಕಾರ್‌ನನ್ನು ಕರೆತಂದು ತನಿಖೆ ಹೆಸರಿನಲ್ಲಿ ಅಮಾನುಷವಾಗಿ ಕೊಂದಿದ್ದಕ್ಕಾಗಿ ಶಿಕ್ಷೆ ಪ್ರಕಟವಾಗುತ್ತದೆ. ಜೈಲಿನಲ್ಲಿ ರೌಡಿ ಒಬ್ಬನಿಗೆ ತನ್ನ ಕಥೆಯನ್ನು ಅರ್ಜುನ್‌ ಹೇಳಲಾರಿಂಭಿಸುವಲ್ಲಿಂದ ಸಿನಿಮಾಕ್ಕೆ ಸರಿಯಾದ ಆರಂಭಸಿಗುತ್ತದೆ. ಬ್ಲಾಕ್‌ ಚೈನ್‌ ತಂತ್ರಜ್ಞಾನದ ಮೂಲಕ ಒಂದು ಕೊಲೆ ಮಾಡುವ ವೆಬ್‌ ಸೈಟ್‌ ಇರುತ್ತದೆ. ಇದಕ್ಕೆ ಸದಸ್ಯರಾಗಲು ಅವರು ಕೊಟ್ಟ ನಿಯಮದಂತೆ ಕೊಲೆ ಮಾಡಬೇಕಾಗಿರುತ್ತದೆ. ಈ ಚೈನ್‌ ಲಿಂಕ್‌ ದೇಶದಾದ್ಯಂತ ಹರಡಿದ್ದು, ಇರದನ್ನು ಅರ್ಜುನ್‌ ಸರ್ಕಾರ್‌ ಹೇಗೆ ಬೇಧಿಸುತ್ತಾನೆ ಎಂಬುದು ಕಥೆಯ ತಿರುಳು.

ಈ ನಡುವೆ ಅರ್ಜುನ್‌ ಸರ್ಕಾರ್‌ಗೆ ವಯಸ್ಸಾದರೂ ಮದುವೆ ಆಗದೆ ಇರುವ ಚಿಂತೆಯೂ ಇರುತ್ತೆ. ಕೆಜಿಎಫ್‌ ಖ್ಯಾತಿಯ ಶ್ರೀನಿಧಿ ಶೆಟ್ಟ ನಾಯಕಿಯಾಗಿ ಕಾಣಿಸಿಕೊಂಡಿದ್ದು, ನಟನೆಗೆ ಇರುವ ಸೀಮಿತ ಅವಕಾಶದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದೇ ಹೇಳಬಹುದು. ಕಥೆಗೆ ಬೇಕಾದಷ್ಟೇ ನಟಿಯನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ.

ಮೊದಲಾರ್ಧದಲ್ಲಿ ಕಥೆಯ ಓಟ ಒಂದು ಬಗೆಯದ್ದಾಗಿದ್ದರೆ, ಎರಡನೇ ಭಾಗಕ್ಕೆ ಅದು ಇನ್ನಷ್ಟೂ ವೇಗವನ್ನು ಪಡೆದುಕೊಳ್ಳುತ್ತದೆ. ಮೊದಲಾರ್ಧ ಪ್ರಕರಣದ ಮೂಲವನ್ನು ಹುಡಿಕಿದರೆ ಎರಡನೇ ಭಾಗದಲ್ಲಿ ಮೂಲವನ್ನು ಪ್ರವೇಶಿಸಿ ವ್ಯೂಹವನ್ನು ನಾಯಕ ಬೇಧಿಸುತ್ತಾನೆ. ನಾನಿ ಈ ಹಿಂದಿನ ಸಿನಿಮಾಗಳಲ್ಲಿ ಎಷ್ಟು ರಕ್ತ ಹರಿಸಿದ್ದಾರೋ ಅದರ ನಾಲ್ಕು ಪಟ್ಟು ರಕ್ತ ಈ ಒಂದು ಚಿತ್ರದಲ್ಲೇ ಹರಿಸಿದ್ದಾರೆ. ನಾನಿ ಇಲ್ಲಿ ಕರುಣೆಯೇ ಇಲ್ಲದೆ ಕೊಲೆಗಳನ್ನು ಮಾಡುತ್ತಾರೆ.

ಬಿಳಿ ಕೋಟ್‌ ಸಂಪೂರ್ಣ ರಕ್ತಮಯವಾಗುತ್ತದೆ. ಅಷ್ಟು ಮಾರಣ ಹೋಮ ನಾನಿಯೇ ಮಾಡುತ್ತಾನೆ. ಕೊನೆಗೆ ಕಳೆದೆರಡು ಕೇಸ್‌ಗಳ ಹೀರೋಗಳ ಎಂಟ್ರಿಯೂ ಆಗುತ್ತದೆ. ಮೂವರು ಒಂದಾಗಿ ಕೈಮ್ಯಾಕ್ಸ್‌ ಪ್ರಕರಣ ಮುಗಿಸುತ್ತಾರೆ.

ನಾಲ್ಕನೇ ಪ್ರಕರಣಕ್ಕೆ ಕಾರ್ತಿಕ್‌:-
ಹಿಟ್‌ ಸರಣಿಯ ಮುಂದಿನ ಸಿನಿಮಾದಲ್ಲಿ ಕಾರ್ತಿಕ್‌ ಕಾಣಿಸಿಕೊಳ್ಳಲಿದ್ದಾರೆ. ಗಣಿಗಾರಿಕೆ ರಿಲೇಟೆಡ್‌ ಪ್ರಕರಣ ಮುಂದಿನ ಚಿತ್ರದಲ್ಲಿದೆಯಾ ಎಂಬ ಹಿಂಟ್‌ ಸಹ ಈ ಚಿತ್ರದ ಕೊನೆಯಲ್ಲಿ ಬಿಂಬಿತವಾಗಿದೆ.

ಒಟ್ಟಿನಲ್ಲಿ ಮಾಸ್‌ ಇಷ್ಟ ಪಡುವವರಿಗೆ ಈ ಚಿತ್ರ ಖುಷಿಕೊಡುತ್ತದೆ. ಆದರೆ ಫ್ಯಾಮಿಲಿ ಸ್ಟಾರ್‌ ನಾನಿಯನ್ನು ಇಷ್ಟ ಪಟ್ಟ ಜನ ಈ ಸಿನಿಮಾ ನಾನಿ ಮಾಡುವಂತಹದ್ದಲ್ಲ ಎಂದು ಹೇಳುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ:-



ಹೆಚ್ಚಿನ ಓದಿಗೆ:-