Vijay Raghavendra in Mahaan; ಮನರಂಜನೆ ಜೊತೆಗೆ ಸಂದೇಶ; ‘ಮಹಾನ್’ ಆದ ವಿಜಯ್‍ ರಾಘವೇಂದ್ರ

ವಿಜಯ್‍ ರಾಘವೇಂದ್ರ (Vijay Raghavendra) ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಪಿ.ಸಿ. ಶೇಖರ್‌ (P C Shekar) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಇತ್ತೀಚೆಗೆ ಆ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರ ಮತ್ತೆ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದೆ.

ಈ ಚಿತ್ರಕ್ಕೆ ‘ಮಹಾನ್‍’ (Mahaan) ಎಂಬ ಹೆಸರನ್ನು ಇಡಲಾಗಿದ್ದು, ಶಿವರಾಜಕುಮಾರ್‌ (Shiva Rajkumar) ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರವನ್ನು ಚಿತ್ರವನ್ನು ಅಲೆಯನ್ಸ್ ಯೂನಿವರ್ಸಿಟಿ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ನಿರ್ಮಿಸುತ್ತಿದ್ದು, ಪಿ. ಸಿ. ಶೇಖರ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್‍ ರಾಘವೇಂದ್ರ ನಾಯಕನಾಗಿ ಅಭಿನಯಿಸುತ್ತಿದ್ದು, ಮಿಕ್ಕ ಕಲಾವಿದರ ಆಯ್ಕೆ ನಡೆಯುತ್ತಿದೆ.

ಈ ಚಿತ್ರದಲ್ಲಿ ‘ಮಹಾನ್‍’ ಯಾರು ಎಂಬ ಪ್ರಶ್ನೆ ಬರುವುದು ಸಹಜ. ಈ ಪ್ರಶ್ನೆಗೆ ರೈತ ಎಂದು ಉತ್ತರಿಸುತ್ತಾರೆ ನಿರ್ದೇಶಕ ಶೇಖರ್‌. ‘ಇದು ದೇಶಕ್ಕೆ ಅನ್ನ ನೀಡುವ ಅನ್ನದಾತನಾದ ರೈತನ ಕುರಿತಾದ ಕಥೆ. ಅದೇ ಕಾರಣಕ್ಕೆ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ. ‘ಮಹಾನ್’ ಎಂದರೆ ಪ್ರಮುಖ, ಶ್ರೇಷ್ಠ ಎಂಬ ಅರ್ಥಗಳು ಬರುತ್ತವೆ. ಅನ್ನ ನೀಡುವ ರೈತ ಎಲ್ಲರಿಗಿಂತ ದೊಡ್ಡವನು ಎಂದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ನಮ್ಮ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ವಿಜಯ್‍ ರಾಘವೇಂದ್ರ ಜೊತೆಗೆ ಹಲವು ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ’ ಅವರು ಹೇಳುತ್ತಾರೆ.

ಇಲ್ಲಿ ಯಾವುದೇ ಒಂದು ಪಾತ್ರ ಮಹಾನ್‍ ಆಗುವುದಕ್ಕಿಂತ, ಚಿತ್ರದ ಸಂದೇಶವೇ ಮಹಾನ್‍ ಆಗಿದೆ ಎನ್ನುತ್ತಾರೆ ವಿಜಯ್‍ ರಾಘವೇಂದ್ರ, ‘ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಒಂದು ಸಂದೇಶವಿದೆ. ನಿಜಕ್ಕೂ ಆ ಸಂದೇಶವೇ ‘ಮಹಾನ್’ ಸಂದೇಶವಾಗಿರಲಿದೆ’ ಎನ್ನುತ್ತಾರೆ.

Mahaan

ಈ ಚಿತ್ರದ ಮೂಲಕ ರೈತರಿಗೆ ಗೌರವ ಅರ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವ ನಿರ್ಮಾಪಕ ಪ್ರಕಾಶ್‍, ‘ಈ ಪಾತ್ರಕ್ಕೆ ವಿಜಯ್‍ ರಾಘವೇಂದ್ರ ಅವರಿಗಿಂತ ಹೆಚ್ಚು ಸೂಕ್ತ ವ್ಯಕ್ತಿ ಯಾರೂ ಇಲ್ಲ. ಅವರ ಅಭಿನಯ, ಅವರ ಆತ್ಮೀಯತೆ ಈ ಪಾತ್ರಕ್ಕೆ ಜೀವ ತುಂಬಲಿದೆ’ ಎಂದು ಹೇಳಿದ್ದಾರೆ.


(Shivarajkumar released vijay raghavendra mahaan film title)


Leave a Reply

Your email address will not be published. Required fields are marked *

Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..