Kuladalli Keelyavudo; ಆನೆ ಬಿಡುಗಡೆ ಮಾಡಿತು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವನ್ನು ಜನರಿಗೆ ತಲುಪಿಸುವುದಕ್ಕೆ ಚಿತ್ರತಂಡ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗೆ ಕುಂಭ ಮೇಳದಲ್ಲಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಯೋಗರಾಜ್‍ ಭಟ್‍ ಬರೆದಿರುವ ‘ನಮ್ ಪೈಕಿ ಒಬ್ಬ ಹೋಗ್ಬುಟ …’ ಎಂಬ ಹಾಡನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು.

ಈಗ ಚಿತ್ರದ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಬರೀ ಬಿಡುಗಡೆ ಮಾಡಲಾಗಿದೆ ಅಷ್ಟೇ ಅಲ್ಲ, ವಿಶೇಷವಾಗಿ ಬಿಡುಗಡೆ ಮಾಡಿಸಲಾಗಿದೆ. ಸಾಮಾನ್ಯವಾಗಿ ಆನೆಗಳನ್ನು ಚಿತ್ರಗಳಲ್ಲಿ ಪಾತ್ರಧಾರಿಗಳಂತೆ ಬಳಸಿಕೊಳ್ಳಲಾಗುತ್ತಿತ್ತು. ಈಗ ಇದೇ ಮೊದಲ ಬಾರಿಗೆ ಆನೆಯೊಂದರಿಂದ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿಸಲಾಗಿದೆ.

ಇದೊಂದು ಯುಗಳಗೀತೆ ಗೀತೆಯಾಗಿದ್ದು, ‘ಮನಸ್ಸು ಹಾಡ್ತಿದೆ ವಯಸ್ಸು ಕಾಡ್ತದೆ …’ ಎಂದು ಸಾಗುತ್ತದೆ. ಈ ಹಾಡನ್ನು ಯೋಗರಾಜ್‍ ಭಟ್‍ ಬರೆದಿದ್ದು, ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಮನೋಮೂರ್ತಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಸೋನು ನಿಗಂ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಯೋಗರಾಜ್‍ ಭಟ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಆ ಸಮಯದಲ್ಲಿ ಮಡೆನೂರು ಮನು ನಟನೆ ನೋಡಿ ಆತ ಬರೀ ಕಾರ್ಯಕ್ರಮಕ್ಕಷ್ಟೇ ಅಲ್ಲ, ಸಿನಿಮಾಗೂ ಸಲ್ಲುವವನು ಅಂತ ಹೇಳಿದ್ದರಂತೆ. ಅದಕ್ಕೆ ಸರಿಯಾಗಿ ಇಸ್ಲಾಮುದ್ದೀನ್ ಜೊತೆಗೆ ಸೇರಿ ಮನುಗೆ ಹೊಂದುವಂತಹ ಕಥೆಯನ್ನು ಅವರು ಬರೆದಿದ್ದಾರೆ. ಈ ಚಿತ್ರವು ಕಳೆದ ವರ್ಷವೇ ಪ್ರಾರಂಭವಾಗಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಗೀತರಚನೆಕಾರ ರಾಮ್‍ನಾರಾಯಣ್‍ ನಿರ್ದೇಶನ ಮಾಡಿದ್ದಾರೆ.

Leave a Reply

Your email address will not be published. Required fields are marked *

Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..