‘UI’ನಲ್ಲಿ ಸಾಕ್ಷಾತ್ಕಾರದ ಕುರಿತು ಉಪೇಂದ್ರ ಸಂದೇಶ

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್ 20ರಂದು ಬಿಡುಗಡೆಯಾಗಿ ಕೆಲವು ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಚಿತ್ರದಲ್ಲಿ ಉಪೇಂದ್ರ ಏನು ಹೇಳಿದ್ದಾರೆ ಎಂಬ ಚರ್ಚೆ ಪ್ರೇಕ್ಷಕರ ವಲಯದಲ್ಲಿ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಇಷ್ಟಕ್ಕೂ ಈ ಚಿತ್ರದಲ್ಲಿ ಉಪೇಂದ್ರ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಚಿತ್ರದ ಸಂತೋಷಕೂಟದಲ್ಲಿ ಭಾಗವಹಿಸಿ ಮಾತನಾಡಿರುವ ಉಪೇಂದ್ರ ಚಿತ್ರದ ಕುರಿತು decode ಮಾಡಿದ್ದಾರೆ. ಈ ಚಿತ್ರದ ಮೂಲಕ ಸಾಕ್ಷಾತ್ಕಾರ ವಿಷಯವನ್ನು ಹೇಳುವ ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಜನ ಚಿತ್ರವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದೆ. ಅದರಂತೆ ಪ್ರೇಕ್ಷಕರು ಚಿತ್ರವನ್ನು ಚೆನ್ನಾಗಿಯೇ ಡೀಕೋಡ್‍ ಮಾಡಿದ್ದಾರೆ. ಈ ಚಿತ್ರದಿಂದ ಏನೇನು ಅರ್ಥವಾಯ್ತು ಎಂಬುದು ಅವರವರಿಗೆ ಬಿಟ್ಟಿದ್ದು. ಅವರವರ ಗ್ರಹಿಕೆಯ ಮೇಲೆ ಚಿತ್ರವು ಬೇರೆಬೇರೆ ರೀತಿ ಅರ್ಥವಾಗುತ್ತಾ ಹೋಗುತ್ತದೆ. ಇಲ್ಲಿ ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ. ಎಲ್ಲವೂ ನೇರವಾಗಿಯೇ ಇದೆ. ಚಿತ್ರದಲ್ಲಿ ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳಿವೆ. ಕೆಲವರು ಕೆಲವು ರೀತಿ ಚಿತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ತಾವು ಅರ್ಥ ಮಾಡಿಕೊಂಡಿದ್ದನ್ನು ಹೇಳುತ್ತಿದ್ದಾರೆ’ ಎಂದರು ಉಪೇಂದ್ರ.

‘ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಕಥೆ ಬಿಸಾಕಿ ಹೋಗುತ್ತೇನೆ. ಇನ್ನು ಮುಂದೆ ಕಥೆಯನ್ನೇ ಮಾಡುವುದಿಲ್ಲ ಎನ್ನುವಂತೆ ತೋರಿಸಿದ್ದೇನೆ. ಏಕೆಂದರೆ, ಕಥೆ ಮಾಡುವ ಮೂಲಕ ನಾನು ಪ್ರೇಕ್ಷಕರ ತಲೆಗೆ ಏನೋ ತುರುಕುವ ಪ್ರಯತ್ನ ಮಾಡುತ್ತೇನೆ. ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ. ಅದನ್ನು ಯಾರೂ ತೆಗೆಯುವ ಪ್ರಯತ್ನ ಮಾಡುತ್ತಿಲ್ಲ. ಅದರ ಬದಲು ತಮ್ಮ ವಿಷಯವನ್ನು ಇನ್ನಷ್ಟು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಕಥೆ ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ. ನಾವೆಲ್ಲಾ ಬೇರೆಯವರ ಕಥೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ನಮಗೆ ನಮ್ಮ ಕಥೆಗಳು ಬೇಡ. ನನ್ನ ಜೀವನವನ್ನು ನಾನು ಚೆನ್ನಾಗಿ ಇಟ್ಟುಕೊಂಡರೆ, ಅದಕ್ಕಿಂತ ಇನ್ನೇನೂ ಬೇಕಾಗಿಲ್ಲ. ಅದನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಕೊನೆಯಲ್ಲಿ ಒಂದು ಗಡಿಯಾರ ತೋರಿಸುತ್ತೇನೆ. ಅದರ ಮೂಲಕ ನಿಮ್ಮ ಸಮಯದ ಬಗ್ಗೆ ಗಮನಹರಿಸಿ ಎಂದು ಸೂಚ್ಯವಾಗಿ ಹೇಳುತ್ತಿದ್ದೇನೆ. ಸಾಕ್ಷಾತ್ಕಾರ ಎನ್ನುವುದು ಎಷ್ಟು ಮುಖ್ಯ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು ಉಪೇಂದ್ರ.

‘UI’ ಚಿತ್ರವನ್ನು ಜಿ.ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ನಿರ್ಮಿಸಿದ್ದು, ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್‍ ಕುಮಾರ್‍, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

Leave a Reply

Your email address will not be published. Required fields are marked *