Meghana Gaonkar; ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೇಘನಾ; ಇದು ಮದುವೆ ಸುದ್ದಿ ಅಲ್ಲ!

- 6 ವರ್ಷಗಳ ಸತತ ಪ್ರಯತ್ನದಿಂದ ಡಾಕ್ಟರೇಟ್ ಪದವಿ ಪಡೆದ ಮೇಘನಾ ಗಾಂವ್ಕರ್
- ‘ಸಿನಿಮಾ ಮತ್ತು ಸಾಹಿತ್ಯ’ ಎಂಬ ವಿಷಯದಲ್ಲಿ ಅಧ್ಯಯನ
- ಡಾಕ್ಟರೇಟ್ ಪದವಿ ತಂದೆಗೆ ಅರ್ಪಣೆ
‘ಛೂ ಮಂತರ್’ ಚಿತ್ರದ ನಂತರ ಮೇಘನಾ ಗಾಂವ್ಕರ್ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಒಂದು ಸಹಿ ಸುದ್ದಿ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಮದುವೆ ಸುದ್ದಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಏನಿದು ಸುದ್ದಿ? ಮೇಘನಾ ಗಾಂವ್ಕರ್ (Meghana Gaonkar) ಇದೀಗ ಡಾ. ಮೇಘನಾ ಗಾಂವ್ಕರ್ ಆಗಿದ್ದು ಪಿಎಚ್‍ಡಿ ಪಡೆದಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಮೇಘನಾ, ತಮ್ಮ ಆರು ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಿಮ್ಮೆಲ್ಲರ ಜೊತೆಗೆ ಒಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳಬೇಕು. ನಾನು ಮದುವೆಯಾಗುತ್ತಿಲ್ಲ. ಕಳೆದ ಆರು ವರ್ಷಗಳಿಂದ ಪಿಎಚ್‍ಡಿಗೆ ತಯಾರಿ ನಡೆಸಿದ್ದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನನ್ನ ಥೀಸಿಸ್ ಕಳಿಸಿದೆ. ಕಳೆದ ವಾರ ನನ್ನ ವೈವಾ ಸಹ ಮುಗಿಯಿತು. ಈಗ ನನಗೆ ಡಾಕ್ಟರೇಟ್ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಇದು ನನಗೆ ಬಹಳ ವಿಶೇಷವಾಗಿದ್ದು. ಏಕೆಂದರೆ, ಈ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಈ ಪಿಎಚ್‍ಡಿ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಇದು ಅವರ ಕನಸು. ನಾನು ಪಿಎಚ್‍ಡಿ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ, ‘ಸಿನಿಮಾ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಮೇಘನಾ ಪಿಎಚ್‍ಡಿ ಮಾಡಿದ್ದಾರೆ. ‘ಇದು ನನ್ನ ಹೃದಯಕ್ಕೆ ಹತ್ತಿರವಾದ ವಿಷಯ. ನಾನು ಮೊದಲು ಪಿಎಚ್‍ಡಿ ಮಾಡಬೇಕೆಂದು ತೀರ್ಮಾನಿಸಿದಾಗಿನಿಂದ, ಬಹಳಷ್ಟು ಜನ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಎಲ್ಲರಿಗೂ ನನ್ನ ಹೃದಯಪೂರ್ವಕವಾದ ಧನ್ಯವಾದಗಳು’ ಎಂದು ತಿಳಿಸಿದ್ದಾರೆ. ವೀಡಿಯೋ ಜೊತೆಗೆ ಪಿಎಚ್‌ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ನಟಿ-ನಿರ್ಮಾಪಕಿ ಜಯಮಾಲ, ಗ್ರಾಮೀಣ ಮಹಿಳೆಯರ ಪುನರ್ವಸತಿ ಕುರಿತಾಗಿ ಥೀಸಿಸ್ ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. ಕನ್ನಡ ಚಿತ್ರರಂಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಆ ಸಾಲಿಗೆ ಡಾ. ಮೇಘನಾ ಗಾಂವ್ಕರ್ ಸಹ ಸೇರಿದ್ದಾರೆ.

(Kannada actress Meghana Gaonkar has been awarded doctorate by the University of Mumbai for her thesis “The metamorphosis of literature into cinema : A study in Adaptation.”
Meghana, who has over 15 Kannada movies to her credit, started working on the project from 2016 itself. She registered her name with the university in 2019.)