L2: Empuraan; ಕರ್ನಾಟಕಕ್ಕೆ ‘L2E: ಎಂಪುರಾನ್’ ಚಿತ್ರ ತಂದ ಹೊಂಬಾಳೆ ಫಿಲಂಸ್

ಈ ವರ್ಷದ ಬಹುನಿರೀಕ್ಷಿತ ಮಲಯಾಳಂ ಚಿತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ‘L2E: ಎಂಪುರಾನ್’ (L2: Empuraan) ಚಿತ್ರ ಸಹ ಒಂದು. ಮಾರ್ಚ್ 27ರಂದು ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯು ವಿತರಿಸುತ್ತಿದೆ.
‘L2E: ಎಂಪುರಾನ್’ ಚಿತ್ರವು 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್’ ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಟ ಪೃಥ್ವಿರಾಜ್ ಸುಕುಮಾರನ್ ಮೊದಲ ಬಾರಿಗೆ ನಿರ್ದೇಶಕರಾದರು. ಈ ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ತೆಲುಗಿನಲ್ಲಿ ರೀಮೇಕ್ ಸಹ ಆಗಿತ್ತು.
ಈ ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ಪೃಥ್ವಿರಾಜ್, ಈ ಚಿತ್ರದ ಮುಂದುರೆದ ಭಾಗವನ್ನು ಘೋಷಿಸಿದ್ದರು. ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಮಂಜು ವಾರಿಯರ್, ಇಂದ್ರಜಿತ್ ಸುಕುಮಾರನ್, ಅಭಿಮನ್ಯು ಸಿಂಗ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ವತಃ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಪೃಥ್ವಿರಾಜ್ ಮತ್ತು ಹೊಂಬಾಳೆ ಫಿಲಂಸ್ ಸ್ನೇಹ ಗಾಡವಾಗಿದ್ದು, ಹೊಂಬಾಳೆ ನಿರ್ಮಾಣದ ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಅಭಿನಯದ ‘ಟೈಸನ್’ ಎಂಬ ಪ್ಯಾನ್ ಇಂಡಿಯಾದ ಚಿತ್ರವನ್ನು ನಿರ್ಮಿಸುವುದಾಗಿ ಹೊಂಬಾಳೆ ಫಿಲಂಸ್ ಘೋಷಿಸಿತ್ತು. ಆದರೆ, ಆ ಚಿತ್ರದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿರಲ್ಲ.
ಹೊಂಬಾಳೆ ನಿರ್ಮಾಣದ ‘ಕೆಜಿಎಫ್ 1’, ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳನ್ನು ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿತರಿಸಿದ್ದರು. ಅದಕ್ಕೆ ಪ್ರತಿಯಾಗಿ ಪೃಥ್ವಿರಾಜ್ ಅಭಿನಯದ ‘ಆಡುಜೀವಿತಂ’ (ದಿ ಗೋಟ್ ಲೈಫ್) ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ವಿತರಣೆ ಮಾಡಿತು. ಈಗ ‘L2E: ಎಂಪುರಾನ್’ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸುತ್ತಿದೆ.
‘L2E: ಎಂಪುರಾನ್’ ಚಿತ್ರವು ಮಲಯಾಳಂ ಅಲ್ಲದೆ, ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.