Yash; ಯಶ್ ಬಿಡುಗಡೆ ಮಾಡಲಿದ್ದಾರೆ ‘ಮನದ ಕಡಲು’ ಚಿತ್ರದ ಟ್ರೇಲರ್

ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ‘ಮನದ ಕಡಲು’ (Manada Kadalu) ಚಿತ್ರವು ಮಾರ್ಚ್ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹೂ ದುಂಬಿಯ ಕಥೆ …’, ‘ತುರ್ರಾ’, ‘ನೀಲಿ ನೀಲಿ ಕಡಲು …’ ಎಂಬ ಮೂರು ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರದ ಟ್ರೇಲರ್‌ನ ಸರದಿ.

‘ಮನದ ಕಡಲು’ ಚಿತ್ರದ ಟ್ರೇಲರ್ ಅನ್ನು ಯಶ್ (Yash) ಬಿಡುಗಡೆ ಮಾಡುತ್ತಿದ್ದಾರೆ. ಇದೇ ಮಾರ್ಚ್ 23ರಂದು ಸಂಜೆ ಆರು ಗಂಟೆಗೆ ಲುಲು ಮಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಯಶ್ ಅಧಿಕೃತವಾಗಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅಂದು ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಯಶ್ ಇದಕ್ಕೂ ಮುನ್ನ ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಚಿತ್ರದಲ್ಲಿ ನಟಿಸಿದ್ದರು. ಅದು ದೊಡ್ಡ ಯಶಸ್ಸು ಪಡೆದಿತ್ತು. ಇನ್ನು, ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಇ. ಕೃಷ್ಣಪ್ಪ ನಿರ್ಮಾಣದ ‘ಮೊಗ್ಗಿನ ಮನಸ್ಸು’. ಅದಕ್ಕೂ ಮುನ್ನ ಯಶ್ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದರಾದರೂ, ಅವರಿಗೆ ಚಿತ್ರರಂಗದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ‘ಮೊಗ್ಗಿನ ಮನಸ್ಸು’. ಈಗ ಇ. ಕೃಷ್ಣಪ್ಪ ಮತ್ತು ಯೋಗರಾಜ್ ಭಟ್ ಜೊತೆಯಾಗಿ ‘ಮನದ ಕಡಲು’ ಚಿತ್ರ ಮಾಡಿದ್ದಾರೆ. ಈಗ ಅವರಿಬ್ಬರನ್ನು ಬೆಂಬಲಿಸುವುದಕ್ಕೆ ಯಶ್, ‘ಮನದ ಕಡಲು’ ಟ್ರೇಲರ್ ಬಿಡುಗಡೆ ಮಾಡುಉವುದಕ್ಕೆ ಬರುತ್ತಿದ್ದಾರೆ.
ಚಿತ್ರ ತಂಡ:-
‘ಮನದ ಕಡಲು’ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಈ ಚಿತ್ರವನ್ನು ಇ.ಕೆ. ಎಂಟರ್‍ಟೈನರ್ಸ್ ಲಾಂಛನದಡಿ ಇ. ಕೃಷ್ಣಪ್ಪ ನಿರ್ಮಿಸಿದ್ದಾರೆ.
manada kadalu trailer launch by rocking star yash.