Nagarahavu; ಕನ್ನಡದಲ್ಲೊಂದು ಹೊಸ ಪ್ರಯೋಗ; 53 ವರ್ಷಗಳ ನಂತರ ‘ನಾಗರಹಾವು’ ಮುಂದಿನ ಭಾಗ

ಸಾಮಾನ್ಯವಾಗಿ ಒಂದು ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಅದರ ಮುಂದಿನ ಭಾಗ ಬರುವುದು ವಾಡಿಕೆ. ಆದರೆ, ಕನ್ನಡದ ಕ್ಲಾಸಿಕ್‍ ಚಿತ್ರಗಳಲ್ಲೊಂದಾದ ‘ನಾಗರಹಾವು’ ಚಿತ್ರದ ಮುಂದಿನ ಭಾಗವು, ಆ ಚಿತ್ರ ಬಿಡುಗಡೆಯಾಗಿ 53 ವರ್ಷಗಳ ಕಾಲ ಬಿಡುಗಡೆಯಾಗುತ್ತಿರುವುದು ವಿಶೇಷ.

ಈ ಹಿಂದೆ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’ ಮತ್ತು ‘ದೇವನಹಳ್ಳಿ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಲ್ಲಕ್ಕಿ ರಾಧಾಕೃಷ್ಣ, ಈಗ ಸದ್ದಿಲ್ಲದೆ ಹೊಸ ಸಿನಿಮಾ ಮಾಡಿದ್ದಾರೆ. ‘ಚಾಮಯ್ಯ ಸನ್‍ ಆಫ್‍ ರಾಮಾಚಾರಿ’ ಎಂಬ ಚಿತ್ರವನ್ನು ಮುಗಿಸಿದ್ದು, ಇದು ‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಾಗಿದೆ.

ಈ ಚಿತ್ರದ ಕಥೆಯನ್ನು ಅವರು ಹಿಂದೊಮ್ಮೆ ವಿಷ್ಣುವರ್ಧನ್‍ ಅವರಿಗೆ ಹೇಳಿದ್ದು, ಅವರು ಸಹ ಮೆಚ್ಚಿಕೊಂಡಿದ್ದರಂತೆ. ಈ ಚಿತ್ರದ ಕುರಿತು ಮಾತನಾಡುವ ಪಲ್ಲಕ್ಕಿ, `ಈ ಬಂಧನ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣುವರ್ಧನ್‍ ಅವರನ್ನು ಭೇಟಿ ಮಾಡಿ, ಇದರ ಸಣ್ಣದೊಂದು ಎಳೆ ಹೇಳಿದ್ದೆ. ಅವರೂ ಇಷ್ಟಪಟ್ಟಿದ್ದರು. ಅವರು ಕಾಲವಾದ ನಂತರ ಇದನ್ನು ಮಾಡುವುದು ಬೇಡವೆಂದು ಸುಮ್ಮನಿದ್ದೆ. ಒಮ್ಮೆ ಉತ್ತರ ಕರ್ನಾಟಕದಲ್ಲಿ ನಾಟಕ ನೋಡಲು ಹೋದಾಗ ಅಲ್ಲಿ ರಂಗಭೂಮಿಯ ಹಿರಿಯ ಕಲಾವಿದ ಜಯಶ್ರೀ ರಾಜ್ (ಜ್ಯೂನಿಯರ್‍ ವಿಷ್ಣುವರ್ಧನ್‍) ನಟನೆ ನೋಡಿದಾಗ, ಸಿನಿಮಾ ಮಾಡುವ ಯೋಚನೆ ಗಟ್ಟಿಯಾಗಿ, ಈ ಚಿತ್ರವನ್ನು ಮಾಡಿದ್ದೇನೆ’ ಎಂದರು.

‘ನಾಗರಹಾವು’ ಚಿತ್ರ ನಿಂತಲ್ಲಿಂದ ಈ ಚಿತ್ರ ಮುಂದುವರೆಯುತ್ತದಂತೆ. ‘ಮೂಲ ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ರಾಮಾಚಾರಿ ಮತ್ತು ಮಾರ್ಗರೆಟ್‍ ಬೆಟ್ಟದ ಮೇಲಿಂದ ಬೀಳುತ್ತಾರೆ ಎಂದು ತೋರಿಸಲಾಗಿದೆ. ಅವರೇನಾದರೂ ಎಂದು ತೋರಿಸಿಲ್ಲ. ನಮ್ಮ ಚಿತ್ರದಲ್ಲಿ ಮಾರ್ಗೆರೆಟ್‍ ಪಾತ್ರ ಸತ್ತಿರುತ್ತದೆ. ರಾಮಾಚಾರಿ ಬದುಕುಳಿಯುತ್ತಾನೆ. ಆದರೆ, ಊರಿನವರು ಅವನನ್ನು ಸೇರಿಸುವುದಿಲ್ಲ. ಈ ಸಂದರ್ಭದಲ್ಲಿ ಪೈಲ್ವಾನ್‍ ಬಸಪ್ಪ, ರಾಮಾಚಾರಿಗೆ ಆಶ್ರಯ ನೀಡಿ, ವೃತ್ತಿರಂಗಭೂಮಿಗೆ ಸೇರಿಸುತ್ತಾರೆ. ಅಲ್ಲಿ ರಾಮಾಚಾರಿ, ಹಲವು ನಾಟಕಗಳಲ್ಲಿ ಪಾತ್ರ ಮಾಡತ್ತಾನೆ. ಯುವತಿಯೊಂದಿಗೆ ರಾಮಾಚಾರಿಗೆ ಪ್ರೀತಿಯಾಗಿ, ಇಬ್ಬರಿಗೂ ಹುಟ್ಟಿದ ಮಗುವೇ ಚಾಮಯ್ಯ. ಮುಂದೆ ರಾಮಾಚಾರಿ ಬದುಕಿನಲ್ಲಿ ಘೋರ ದುರಂತ ನಡೆಯುತ್ತದೆ. ಆಗ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದು ವಿವರಿಸಿದರು ಅವರು.

ಈ ಚಿತ್ರಕ್ಕೆ ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆಯಂತೆ. ‘ನಾನು ಈ ಚಿತ್ರದಲ್ಲಿ ಜಲೀಲನ (ಅಂಬರೀಷ್) ಮಗ ಚೋಟಾ ಜಲೀಲ್ ಆಗಿ ನಟಿಸಿದ್ದೇನೆ. ಕೊಲೆ ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರಿ, ಮಗಳಾಗಿ ಚೈತ್ರಾ, ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್‌ ಅರಸು, ಪ್ರೇಮಾಗೌಡ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಮುಂತಾದವರು ನಟಿಸಿದ್ದಾರೆ’ ಎಂದರು.

‘ಚಾಮಯ್ಯ ಸನ್‍ ಆಫ್‍ ರಾಮಾಚಾರಿ’ (Chamayya Son of Ramachari) ಚಿತ್ರವನ್ನು ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪಲ್ಲಕ್ಕಿ ಸ್ಟುಡಿಯೋಸ್‍ ಬ್ಯಾನರ್‌ ಅಡಿ ವಿತರಣೆಯನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕೆ ಸ್ಯಾಂ ಸಂಗೀತ ಮತ್ತು ಎಂ.ಆರ್. ಸೀನು ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *