Megha Shetty; ತಮಿಳು ಚಿತ್ರರಂಗಕ್ಕೆ ಮೇಘಾ ಶೆಟ್ಟಿ ಪದಾರ್ಪಣೆ; ‘ಕಾಳೈಯಾನ್’ ಚಿತ್ರೀಕರಣ ಆರಂಭ

ಕಿರು ತೆರೆಯ ನಟನೆಯಲ್ಲಿ ಖ್ಯಾತಿ ಗಳಿಸಿ ಸಿನಿಮಾಕ್ಕೆ ಪ್ರವೇಶ ಪಡೆದು ಚಿತ್ರ ರಸಿಕರ ಮೆಚ್ಚುಗೆ ಗಳಿಸಿದ್ದ ನಟಿ ಮೇಘಾ ಶೆಟ್ಟಿ ಈಗ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಜಯತೀರ್ಥ ನಿರ್ದೇಶನದ ʻಕೈವʼದಲ್ಲಿ ನಟಿಸಿ ಮೇಘಾ ಮೆಚ್ಚುಗೆ ಗಳಿಸಿದ್ದರು. ಈಗ ತಮಿಳಿನಿನ ‘ಕಾಳೈಯಾನ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

‘ಕಾಳೈಯಾನ್’ ಎಂಬ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಎಂ. ಗುರು ಬರೆದು, ನಿರ್ದೇಶಿಸಿದ್ದಾರೆ. ಜಂಬರ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಧರ್ಮರಾಜ್ ವೇಲುಚಾಮಿ ನಿರ್ಮಿಸಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಿದೆ.

‘ಕನ್ನಡದಲ್ಲಿ ಉತ್ತಮ ಚಿತ್ರಗಳಲ್ಲಿ ನಟಿಸಿದ ನಂತರ, ನಾನು ಕೆಲವು ಉತ್ತಮ, ಕಂಟೆಂಟ್ ಆಧರಿತ ಯೋಜನೆಗಳನ್ನು ಹುಡುಕುತ್ತಿದ್ದೆ. ಆದ್ದರಿಂದ ಸಮಯ ತೆಗೆದುಕೊಂಡಿತು. ತಮಿಳಿನಲ್ಲಿ ಅಂತಹ ಚಿತ್ರ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ನನಗೆ ದೊಡ್ಡ ಬ್ರೇಕ್ ಆಗಿದೆ. ಸತ್ಯರಾಜ್, ಶಶಿಕುಮಾರ್ ಮತ್ತು ಭರತ್‌ರಂತಹ ಕೆಲವು ಅತ್ಯುತ್ತಮ ನಟರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಮೇಘ ಹೇಳಿದ್ದಾರೆ.

ಕಾಳೈಯನ್ ಜೊತೆಗೆ ಮೇಘಾ ಶೆಟ್ಟಿ ಹಲವು ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ. ವಿನಯ್ ರಾಜ್‌ಕುಮಾರ್ ಅಭಿನಯದ ‘ಗ್ರಾಮಾಯಣ’ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ‘ಚೀತಾ’ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ‘ಆಪರೇಷನ್ ಲಂಡನ್ ಕೆಫೆ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ‘ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಂದೆರಡು ಯೋಜನೆಗಳ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಪ್ರಯಾಣವು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *