Sati Sulochana; ಕನ್ನಡದಲ್ಲಿ ಮತ್ತೆ ʻಸತಿ ಸುಲೋಚನಾ’; ತಾತನ ಪಾತ್ರದಲ್ಲಿ ಮೊಮ್ಮಗ

‘ರಾಜಾ ಹರಿಶ್ಚಂದ್ರ’ ಎಂಬ ಭಾರತದ ಮೊದಲ ಮೂಕಿ ಚಿತ್ರವನ್ನು ದಾದಾ ಸಾಹೇಬ್‍ ಫಾಲ್ಕೆ ಹೇಗೆ ಚಿತ್ರ ನಿರ್ದೇಶಿಸಿದ್ದರು, ಅದಕ್ಕಾಗಿ ಏನೆಲ್ಲಾ ಸಾಹಸ ಮಾಡಿದ್ದರು ಎಂಬ ಕುರಿತು ಮರಾಠಿಯಲ್ಲಿ ಕೆಲವು ವರ್ಷಗಳ ಹಿಂದೆ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಎಂಬ ಚಿತ್ರ ಬಂದಿತ್ತು. ಅದೇ ರೀತಿ ‘ವಿಕಟಕುಮಾರನ್’ ಎಂಬ ಮಲಯಾಳಂನ ಮೊದಲ ಮೂಕಿ ಚಿತ್ರವನ್ನು ಜೆ.ಸಿ. ಡೇನಿಯಲ್‍ ಎಷ್ಟೆಲ್ಲಾ ಕಷ್ಟಗಳ ನಡುವೆ ನಿರ್ಮಿಸಿ-ನಿರ್ದೇಶಿಸಿದರು ಎಂಬ ಕುರಿತು ‘ಸೆಲ್ಯುಲಾಯ್ಡ್’ ಎಂಬ ಚಿತ್ರ ಬಂದಿತ್ತು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗವಾಗುತ್ತಿದೆ.

ಕನ್ನಡದ ಮೊದಲ ಟಾಕಿ ಚಿತ್ರ ‘ಸತಿ ಸುಲೋಚನಾ’ (Sati Sulochana) ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಆ ಚಿತ್ರ ಹೇಗೆ ನಿರ್ಮಾಣವಾಯಿತು, ಆ ಚಿತ್ರದ ಹಿಂದೆ ಯಾರೆಲ್ಲಾ ಇದ್ದರು ಎಂಬುದರ ಕುರಿತು ವಿವರಣೆ ಇಲ್ಲ. ಈಗ ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ, ‘ಸತಿ ಸುಲೋಚನಾ -3-3-34’ ಎಂಬ ಚಿತ್ರದ ಮೂಲಕ, ಕನ್ನಡದ ಮೊದಲ ವಾಕ್ಚಿತ್ರ ತಯಾರಾದ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

‘ಸತಿ ಸುಲೋಚನಾ’ ಬಿಡುಗಡೆಯಾಗಿ ಮಾರ್ಚ್ 03ಕ್ಕೆ 91 ವರ್ಷಳಾಗಿವೆ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರ ರಾವ್, ತ್ರಿಪುರಾಂಭ ಮುಂತಾದವರು ಅಭಿನಯಿಸಿದ ಈ ಚಿತ್ರವು ಇದೀಗ ಮರುಸೃಷ್ಟಿಯಾಗುವುದಕ್ಕೆ ಸಜ್ಜಾಗಿದೆ. ಹಾಗಂತ ‘ಸತಿ ಸುಲೋಚನಾ’ ಚಿತ್ರವನ್ನೇ ಶೇಷಾದ್ರಿ ನಿರ್ದೇಶನ ಮಾಡತ್ತಿಲ್ಲ. ಅದರ ಬದಲು ‘ಸತಿ ಸುಲೋಚನಾ’ ಹೇಗೆ ನಿರ್ಮಾಣವಾಯಿತು ಎಂದು ‘ಸತಿ ಸುಲೋಚನಾ – 3-3-34’ ಎಂಬ ಹೊಸ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದು, ಈ ಚಿತ್ರವು ‘ಸತಿ ಸುಲೋಚನಾ’ ಬಿಡುಗಡೆಯಾದ ದಿನವೇ ಅಧಿಕೃತವಾಗಿ ಘೋಷಣೆಯಾಗಿದೆ.

‘ಸತಿ ಸುಲೋಚನಾ – 3-3-34’ ಚಿತ್ರವನ್ನು ಸೃಜನ್ ಲೋಕೇಶ್ ತಮ್ಮ ಲೋಕೇಶ್‍ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಿಸುವುದರ ಜೊತೆಗೆ ತಮ್ಮ ತಾತ ಸುಬ್ಬಯ್ಯ ನಾಯ್ಡು ಅವರ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸುಬ್ಬಯ್ಯ ನಾಯ್ಡು ಅವರು ‘ಸತಿ ಸುಲೋಚನಾ’ ಚಿತ್ರದ ನಾಯಕರಾಗುವುದರ ಮೂಲಕ ಕನ್ನಡ ಚಿತ್ರರಂಗದ ಮೊದಲ ನಾಯಕರೆನಿಸಿಕೊಂಡಿದ್ದಾರೆ.

ಇದನ್ನೂ ಓದು:- World Kannada Cinema Day; ವಿಶ್ವ ಕನ್ನಡ ಸಿನಿಮಾ ದಿನ: ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣದ ಕಥನ ಇದು

ಈ ಚಿತ್ರದ ಕುರಿತು ಮಾತನಾಡುವ ಪಿ. ಶೇಷಾದ್ರಿ (P Sheshadri), ʻಸತಿ ಸುಲೋಚನಾ’ ಚಿತ್ರದ ಕೆಲವು ಫೋಟೋಗಳನ್ನು ಹೊರತುಪಡಿಸಿದರೆ, ಒಂದು ತುಣುಕು ಸಹ ಇಲ್ಲ. ಆ ಚಿತ್ರದ ಚಿತ್ರಕಥೆ ಸಹ ಇಲ್ಲ. ಆ ಚಿತ್ರವನ್ನು ನೋಡಿದ ಯಾರೂ ಈಗ ಬದುಕಿಲ್ಲ. ರಾಮಾಯಾಣದ ಉಪಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ರಾವಣನ ಮಗ ಇಂದ್ರಜಿತುವಿನ ಹೆಂಡತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಈ ಚಿತ್ರ ಹೇಗೆ ತಯಾರಾಯಿತು ಎಂಬುದರ ಕುರಿತು ಚಿತ್ರ ಮಾಡುತ್ತಿದ್ದೇವೆ. ಏಕೆಂದರೆ, ಆ ಚಿತ್ರವಾದ ಸಂದರ್ಭದಲ್ಲಿ ಲೈಟುಗಳಿರಲಿಲ್ಲ. ಸೂರ್ಯನ ಬೆಳಕಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಕೊಲ್ಹಾಪುರದ ಸ್ಟುಡಿಯೋದಲ್ಲಿ ಈ ಚಿತ್ರಕ್ಕೆ ಸೆಟ್‍ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿತ್ತು. ಅದೆಲ್ಲವನ್ನೂ ಈ ಚಿತ್ರದಲ್ಲಿ ತೋರಿಸಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ನಾವು ಪ್ರತಿ ವರ್ಷ ಮಾರ್ಚ್ 03ರಂದು ‘ಸತಿ ಸುಲೋಚನ’ ಚಿತ್ರದ ಬಗ್ಗೆ ನೆನಪಿಸಿಕೊಳ್ಳುತ್ತೇವೆ. ಆ ನಂತರ ಮರೆತುಬಿಡುತ್ತೇವೆ ಎನ್ನುವ ಸೃಜನ್‍ ಲೋಕೇಶ್‍, ʻಸತಿ ಸುಲೋಚನಾ’ ಕನ್ನಡದ ಮೊದಲ ಚಿತ್ರ ಎಂಬ ವಿಷಯವನ್ನು ಹೊರತುಪಡಿಸಿದರೆ, ನಮಗೆ ಆ ಚಿತ್ರ ಬಗ್ಗೆ ಹೆಚ್ಚು ವಿಷಯ ಗೊತ್ತಿಲ್ಲ. ಆ ಚಿತ್ರ ಹೇಗಾಯ್ತು? ನಿರ್ಮಾಣದ ಸಂದರ್ಭದಲ್ಲಿ ಏನೆಲ್ಲಾ ಆಯ್ತು? ಎಂಬುದರ ಬಗ್ಗೆ ಹೆಚ್ಚು ಮಾಹಿತಿಗಳಿಲ್ಲ. ನಮಗೆ ಸಿಕ್ಕಿರುವ ಮಾಹಿತಿಗಳನ್ನು ಇಟ್ಟುಕೊಂಡು ಒಂದು ಕಥೆ ಮಾಡಿ, ಚಿತ್ರ ಮಾಡುತ್ತಿದ್ದೇವೆ. ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಮುಂದಿನ ವರ್ಷ ಮಾರ್ಚ್ 03ರಂದು ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ.

1934ರಲ್ಲಿ ಬಿಡುಗಡೆಯಾಗಿದ್ದ ‘ಸತಿ ಸುಲೋಚನಾ’ ಚಿತ್ರವನ್ನು ಷಾ ಚಮನ್‌ಲಾಲ್ ಡುಂಗಾಜಿ ಮತ್ತು ಷಾ ಭೂರ್‌ಮಲ್ ಚಮನ್‌ಲಾಲ್‌ಜಿ ನಿರ್ಮಿಸಿದರೆ, ಈ ಚಿತ್ರವನ್ನು ಹಿರಿಯ ನಟಿ ಲಕ್ಷ್ಮೀ ಅವರ ತಂದೆ ವೈ.ವಿ. ರಾವ್ ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದರೆ, ಆರ್. ನಾಗೇಂದ್ರ ರಾವ್ ಸಂಗೀತ ಸಂಯೋಜಿಸಿದ್ದರು. ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು, ತ್ರಿಪುರಾಂಭ, ಕಮಲಾ ಬಾಯಿ, ವೈ.ವಿ. ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Leave a Reply

Your email address will not be published. Required fields are marked *