Prajwal Devaraj; ಮಾರ್ಚ್ 7 ಕ್ಕೆ ಬರಲಿದೆ ಪ್ರಜ್ವಲ್ ಅಭಿನಯದ ‘ರಾಕ್ಷಸ’

ಲೋಹಿತ್ ಹೆಚ್ ನಿರ್ದೇಶನದ ಟೈಮ್-ಲೂಪ್ ಹಾರರ್ ಚಿತ್ರ ‘ರಾಕ್ಷಸ’ ದೊಂದಿಗೆ ಪ್ರೇಕ್ಷಕರ ಎದುರಿಗೆ ಬರಲು ಸಿದ್ಧರಾಗಿದ್ದಾರೆ ಪ್ರಜ್ವಲ್ ದೇವರಾಜ್ (Prajwal Devaraj). ಚಿತ್ರ ಶಿವರಾತ್ರಿ ಹಬ್ಬದಂದು ಅಂದರೆ ಫೆಬ್ರುವರಿ 28ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು, ಆದರೆ, ಮತ್ತೊಮ್ಮೆ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
ಈಗ ಮಾರ್ಚ್ 7 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಾಂತ್ರಿಕ ತೊಂದರೆಗಳಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಶಾನ್ವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ದೀಪು ಬಿಎಸ್, ನವೀನ್ ಗೌಡ ಮತ್ತು ಮಾನಸ್ ಈ ಸಿನಿಮಾವನ್ನು ನಿರ್ಮಿಸಿದ್ದು, ನೋಬಿನ್ ಪಾಲ್ ಅವರ ಸಂಗೀತ ಸಂಯೋಜನೆ, ಜೇಬಿನ್ ಪಿ ಜೇಕಬ್ ಅವರ ಛಾಯಾಗ್ರಹಣ, ವಿನೋದ್ ಅವರ ಸಾಹಸ ನಿರ್ದೇಶನವಿದೆ.
ಪ್ರಜ್ವಲ್ ದೇವರಾಜ್ ಹಾರರ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಮಮ್ಮಿ ಸೇವ್ ಮಿ ಮತ್ತು ದೇವಕಿ ನಿರ್ದೇಶಕ ಲೋಹಿತ್ ಎಚ್ ನಿರ್ದೇಶನದ ಈ ಚಿತ್ರದಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ, ಶೋಭರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್ ಮತ್ತು ಅರುಣ್ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ರಾಕ್ಷಸ ಸಿನಿಮಾದ ಶೇ 80 ರಷ್ಟು ಚಿತ್ರೀಕರಣ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದಿದ್ದು, ಚಿತ್ರದ ಇನ್ನುಳಿದ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.