Dhanveer Vamana; ಅಂತೂ ಫಿಕ್ಸ್ ಆಯ್ತು ʻವಾಮನʼ ಬಿಡುಗಡೆಗೆ ದಿನಾಂಕ

ಧನ್ವೀರ್ (Dhanveer) ಮತ್ತು ರೀಷ್ಮಾ ನಾಣಯ್ಯ (Reeshma Nanaiah) ನಟನೆಯ ವಾಮನ (Vamana) ಚಿತ್ರ ಒಂದು ವರ್ಷದ ಹಿಂದೆಯೇ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಅನಿರೀಕ್ಷಿತ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ಕೊನೆಗೂ ಬಿಡುಗಡೆಯ ದಿನಾಂಕ ಗೊತ್ತಾಗಿದೆ. ವಾಮನ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಬರಲಿದ್ದಾನೆ.
ಮುದ್ದು ರಾಕ್ಷಸಿ ಹಾಡು ಬಿಡುಗಡೆ 29 ಲಕ್ಷ ವೀಕ್ಷಣೆ ಪಡೆದು ಹಿಟ್ ಆಗಿತ್ತು. ಅಲ್ಲದೇ ಚಿತ್ರದ ಟೀಸರ್ ಕೂಡ ಎಲ್ಲರ ಗಮನ ಸೆಳೆದಿತ್ತು. ವರ್ಷದ ನಂತರ ಈಗ ವಾಮನ ತೆರೆಗೆ ಬರಲಿ ಸಜ್ಜಾಗಿದೆ.
ಶಂಕರ್ ರಾಮನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಸ್ಯಾಂಡಲ್ವುಡ್ಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಏಕ್ ಲವ್ ಯಾ, ಯುಐ ಮತ್ತು ಬಾನದಾರಿಯಲ್ಲಿ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾದ ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತಾರಾ ಅನುರಾಧ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಅವರನ್ನೊಳಗೊಂಡ ತಾರಾಗಣ ಚಿತ್ರದಲ್ಲಿದೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ, ಗೀತೆಗಳಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಮಹೇಂದ್ರ ಸಿಂಗ್ ಛಾಯಾಗ್ರಹಣ, ಭೂಷಣ್ ನೃತ್ಯ ಸಂಯೋಜನೆ ಚಿತ್ರದಲ್ಲಿ ಕಾಣಬಹುದು. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಧನ್ವೀರ್ 2019ರಲ್ಲಿ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ನಂತರ ‘ಬೈ ಟು ಲವ್’, ‘ಕೈವ’ ಚಿತ್ರಗಳಲ್ಲಿ ನಟಿಸಿದ್ದಾರೆ. ಧನ್ವೀರ್ ಈಗ ವಾಮನಾ ಎಂಬ ನಾಲ್ಕನೇ ಸಿನಿಮಾದಲ್ಲಿ ಮಾಸ್-ಆ್ಯಕ್ಷನ್ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ.